ಸತ್ತ ಅಮ್ಮನ ಮುಂದೆ ಇದೆಂಥಾ ಗತ್ತು ಗೈರತ್ತು? ಚುನಾವಣೆ ಮುಗಿದು ವಾರವೂ ಆಗಿಲ್ಲ. ಆಗಲೇ ಶಕುಂತಲಮ್ಮ ಇಹಲೋಕ ಯಾತ್ರೆ ಮುಗಿಸಿದರು. ಮಲ್ಯ ಆಸ್ಪತ್ರೆಯಲ್ಲಿ ನಿಧನರಾದ ಅವರ ಪಾರ್ಥಿವ ಶರೀರವನ್ನು ಸದಾಶಿವ ನಗರದ ಮನೆಗೆ ಕರೆತಂದಾಗ ಅಲ್ಲಿಗೆ ಕುಮಾರ್ ಬಂಗಾರಪ್ಪ ಕುಟುಂಬ ಸಮೇತ ಬಂದರು. ಬಹುಶಃ ಸುದ್ದಿವಾಹಿನಿಯವರ ಕೆಮೆರಾ ಇರದಿದ್ದರೆ ಕುಮಾರ್ ಬಂಗಾರಪ್ಪನಿಗೆ ಗೇಟ್‌ಪಾಸ್ ಸಿಗುತ್ತಿತ್ತು. ನಂತರ ಸೊರಬದ ಕುಬಟೂರಿಗೆ ಪಾರ್ಥಿವ ಶರೀರ ತಂದಾಗ ಅಲ್ಲಿ ಗಲಾಟೆಯೂ ನಡೆಯಿತು. ಮುಖ್ಯವಾಗಿ ಕುಮಾರ್ ಬಂಗಾರಪ್ಪರ ಜೊತೆಗಿದ್ದ ಬಂಗಾರಪ್ಪರ ಅಕ್ಕನ ಮಗ ಪಾಲಾಕ್ಷಪ್ಪ ಕುಟುಂಬದವರು ಅಂತಿಮ ದರ್ಶನಕ್ಕೆ ಬರಬಾರದು ಎಂಬುದು ಮಧು ಹಾಗೂ ಅವರ ಸೋದರಿಯರ ಆಕ್ಷೇಪವಾಗಿತ್ತು. ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಪಾಲಾಕ್ಷಪ್ಪ ಕುಟುಂಬದವರೇ ವಾಪಾಸ್ ಹೋದರು. ತಮಗಾಗದವರು ಹೆಣದ ಮುಖ ಕೂಡ ನೋಡಬಾರದು ಎಂಬಲ್ಲಿವರೆಗೆ ದ್ವೇಷಿಸುವುದೆಂದರೆ. ಇದು ಅಸಹ್ಯ ಎಂದು ಸ್ಥಳದಲ್ಲಿದ್ದವರೇ ಮಾತನಾಡಿಕೊಂಡರು. ಕೊನೆಗೂ ಮಧು ಬಂಗಾರಪ್ಪರೇ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪುಣ್ಯವಶಾತ್ ಕುಮಾರ್ ಬಂಗಾರಪ್ಪಗೆ ಪಕ್ಕದಲ್ಲಿರಲು ಅವಕಾಶ ನೀಡಲಾಯಿತು. ಬಂಗಾರಪ್ಪ ನಿಧನರಾದಾಗ ಹತ್ತಿರ ಸುಳಿಯಲೂ ಬಿಡದೆ ರಂಪಾಟ ನಡೆದಿದ್ದು ಅಷ್ಟರ ಮಟ್ಟಿಗೆ ತಪ್ಪಿಹೋದಂತಾಗಿತ್ತು. ಅಪ್ಪ-ಅಮ್ಮರ ಸಾವಿನ ಸಂದರ್ಭದಲ್ಲಿ ಹೀಗೆ ಬಡಿದಾಡಿದ್ದನ್ನು ನೋಡಿದವರಿಗೆ ಮಕ್ಕಳು ಇದೆಂತಹ ಸಂಸ್ಕಾರ ಕಲಿತರು ಎನ್ನಿಸದಿರದು. ಎಷ್ಟೇ ಕಿತ್ತಾಟ, ದ್ವೇಷವಿದ್ದರೂ ಅಪ್ಪ-ಅಮ್ಮ ಸತ್ತಾಗ ಅಂತ್ಯಸಂಸ್ಕಾರದ ಮಟ್ಟಿಗಾದರೂ ಮಕ್ಕಳು ಒಗ್ಗೂಡುತ್ತಾರೆ. ಚಿತೆಗೆ ಹಿರಿಯ ಮಗನಿಂದಲೇ ಅಗ್ನಿಸ್ಪರ್ಶ ಮಾಡಿಸುತ್ತಾರೆ. ಏನೂ ಕಲಿಯದ ಹಳ್ಳಿಗರಲ್ಲೂ ಇಷ್ಟು ಸಂಸ್ಕಾರವಿರುತ್ತದೆ. ಬಂಗಾರಪ್ಪ ಮಕ್ಕಳು ಹೀಗೆ ಸಂಸ್ಕಾರ ಶೂನ್ಯರಾದರಲ್ಲ ಎಂಬುದಾಗಿ ಸೊರಬದ ಜನ ಚಿಂತೆಗೀಡಾದದ್ದು ಮಾತ್ರ ನಿಜವೇ.
Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.