ಸೆಂಚುರಿಗೆ ಮುಂಚೆ ಒಂದು ಭರ್ಜರಿ ಸಿಕ್ಸರ್ Nervous Nineties. ಇದು ಕ್ರಿಕೆಟ್ ಆಟದಲ್ಲಿ ಬಳಕೆಯಲ್ಲಿರುವ ಪದ. 99 ರನ್ ಹೊಡೆದ ಆಟಗಾರನನ್ನು ಸಾಮಾನ್ಯವಾಗಿ ಈ ಭೀತಿ ಕಾಡುತ್ತದೆ. ಸೆಂಚುರಿ ಹೊಡೆಯಬೇಕು ಅನ್ನುವ ಬಯಕೆ ಮತ್ತು ಒತ್ತಡಗಳಿಗೆ ಸಿಲುಕಿ ಆತ ಔಟ್ ಆಗುತ್ತಾನೆ. ನಿಮ್ಮ ಮೆಚ್ಚಿನ ಓ ಮನಸೇ ಪತ್ರಿಕೆಗೆ ಈಗ 99. ಆದರೆ ನಮ್ಮನ್ನು ಆ ನೈಂಟೀಸ್ ನರ್ವಸ್ ಕಾಡಿಲ್ಲ, ಬದಲಾಗಿ ನಾಳೆಯ ಶತಕಕ್ಕೆ ಒಂದು ಅದ್ಭುತ ಮುನ್ನುಡಿಯಂತೆ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಈ ಬಾರಿಯ ವಿಜಯದಶಮಿ ಹಬ್ಬಕ್ಕೆ ನಮ್ಮ ಓದುಗರಿಗೆ ಈ ಸಂಚಿಕೆ ಒಂದು ಒಳ್ಳೆಯ ಗಿಫ್ಟ್. ನಾಳೆಯೇ ನಿಮ್ಮ ಮನೆಪಕ್ಕದ ಅಂಗಡಿಯಲ್ಲಿ ವಿಚಾರಿಸಿ. ಪ್ರೀತಿ ಮಾಡಬಾರದು... ...ಆದರೆ ಜಗಕೆ ಹೆದರಬಾರದು ಅಂದರು ಹಂಸಲೇಖಾ. ಆದರೆ ನಮ್ಮದು ಉಪೇಂದ್ರರ ಥಿಯರಿ. ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದನೆಕಾಯಿ ಅಂತೀವಿ ನಾವು. ಹಠಕ್ಕೆ ಬಿದ್ದು ಲವ್ ಮಾಡೋದು, ಮೋಸ ಹೋದೆ ಎಂದು ಗೋಳಿಡುವುದು, ಮತ್ತೆ ಐ ಲವ್ ಯೂ ಎಂದು ಊಳಿಡುವುದು, ಇವೆಲ್ಲ ಒಂದು ಚಟ. ಲವ್ ಮಾಡಲೇಬೇಕು ಎಂದು ಶಪಥ ಮಾಡಿದ್ರೆ ನಿಮ್ಮನ್ನು ನೀವೇ ಪ್ರೀತಿಸಿ. ಆಗ ಬೇರೆಯವರೂ ನಿಮ್ಮನ್ನು ಪ್ರೀತಿಸುತ್ತಾರೆ. ಈ ಫಿಲಾಸಫಿ ಅರ್ಥ ಆಗಬೇಕಾದರೆ ಈ ಲೇಖನ ಓದಲೇಬೇಕಾಗುತ್ತದೆ. ಬ್ರಹ್ಮಚಾರಿಯ ಬ್ರಹ್ಮಾನಂದ... ನಮ್ಮ ಪ್ರಧಾನಿ ಮೋದಿ ಬ್ರಹ್ಮಚಾರಿ. ರಾಹುಲ್ ಗಾಂಧಿ, ಸಲ್ನಾನ್ ಖಾನ್ ಕೂಡಾ ಬ್ರಹ್ಮಚಾರಿಗಳೇ. ಬ್ರಹ್ಮಚಾರಿಗಳು ತಪ್ಪು ಮಾಡಿದ್ರೆ ಕ್ಷಮೆ ಇದೆ, ಮತ್ತೆ ತಪ್ಪು ಮಾಡುವುದಕ್ಕೆ ಲೈಸೆನ್ಸೂ ಇದೆ. ಗೆಳೆಯರಿಗೋಸ್ಕರ ಜೀವ ಬಿಡುವ ಬ್ಯಾಚುಲರ್ ಎಂಬ ಈ ಅಬ್ಬೇಪಾರಿ ಲೋಫರ್ ಗಳ ಲೈಫ್ ಸ್ಟೈಲ್ ಕಡೆಗೆ ನಾವು ಟಾರ್ಚ್ ಬಿಟ್ಟಿದ್ದೇವೆ. ಇವರಿಗೆ ಹೇಳೋರಿಲ್ಲ, ಕೇಳೋರಿಲ್ಲ. ಆದರೆ ಇವರಿಲ್ಲದಿದ್ದರೆ ದೇಶಕ್ಕೆ ನೆಮ್ಮೆದಿಯೇ ಇಲ್ಲ. ಅವಳು ಜೀವದ ಗೆಳತಿ, ಈಗ ಅವಳೇ ನನ್ನ ಸವತಿ ಇದೊಂದು ನಂಬಿಕೆದ್ರೋಹದ ಕತೆ. ಜೀವ ಕೊಡ್ತೀನಿ ಅಂದಿದ್ದ ಗೆಳತಿ ಈಗ ತನ್ನ ಬದುಕನ್ನೇ ನಾಶ ಮಾಡೋದಕ್ಕೆ ಹೊರಟಿದ್ದಾಳೆ, ಅವಳು ಮಾಡಿದ ಕೆಲಸಕ್ಕೆ ಅವಳನ್ನೇ ಕೊಂದೇಬಿಡಬೇಕು ಅನಿಸ್ತಿದೆ. ಹಾಗಂತ ಆಕ್ರೋಶದಲ್ಲಿ ಬೇಯುತ್ತಿರುವ ಗೃಹಿಣಿಗೆ ರವಿ ಬೆಳಗೆರೆ ‘ಸಮಾಧಾನ’ ಹೇಳಿದ್ದಾರೆ. ಅದನ್ನು ಓದಿದರೆ ಅವಳಷ್ಟೇ ಅಲ್ಲ, ನೀವೂ ಕರಗಿಹೋಗಬೇಕು. ಏನದು? ಒಂದ್ಸಾರಿ ಓದಿದರೆ ಗೊತ್ತಾಗುತ್ತದೆ. ಕಾಲವೆಂಬುದು ಗಿರಗಿರ ತಿರುಗುವ ಬುಗುರಿ ಅಮರಕೃತಿಗಳನ್ನು ರಚಿಸಿದವರೆಲ್ಲರೂ ಮಹಾತ್ಮರಲ್ಲ, ಅವರೊಳಗೆ ಅಸಹ್ಯಕರವಾದ ಚಿಂತನೆಯೂ ಇರುತ್ತದೆ. ಇಂಥಾ ದೊಡ್ಡವರ ಸಣ್ಣತನಗಳನ್ನು ತಮ್ಮ ನೆನಪಿನಂಗಳದಿಂದ ಹೆಕ್ಕಿ ನಿಮ್ಮ ಮುಂದೆ ಇರಿಸಿದ್ದಾರೆ ರವಿ ಬೆಳಗೆರೆ. ಓದಿದರೆ ಬೆಚ್ಚಿಬೀಳುತ್ತೀರಿ, ನಕ್ಕು ನಲಿಯುತ್ತೀರಿ ಕೂಡಾ. ಅದು ‘ಮನಸಿನ್ಯಾಗಿನ ಮಾತು’. ಹೆಂಡತಿಯೆಂದರೆ ಹೀಗಿರಬೇಕು... ದ್ವಿಪದಿ, ತ್ರಿಪದಿ, ಚೌಪದಿ, ದ್ರೌಪದಿ....ಪ್ರಾಸವೇನೋ ಚೆನ್ನಾಗಿದೆ. ಆದರೆ ಮಹಾಭಾರತದಲ್ಲಿ ಪಾಂಡವರ ಶೌರ್ಯದ ಗುಣಗಾನವಿದೆಯೇ ಹೊರತು ಪಂಚಗಂಡರ ಜೊತೆ ಅಸಹಜ ದಾಂಪತ್ಯ ನಡೆಸಿದ ದ್ರೌಪದಿಯ ಬಗ್ಗೆ ಯಾರಿಗೂ ಆಸಕ್ತಿಯಿಲ್ಲ. ಬನ್ನಿ ದ್ರೌಪದಿಯ ವ್ಯಥೆಯ ಕತೆ ಓದೋಣ. ಬಡವರ ಮನೆಯ ತೆಳಿಗಂಜಿಗೆ ಮೃಷ್ಟಾನ್ನದ್ದೇ ರುಚಿ ದನ ಗಂಜಿ ಹೀರುವಾಗ ಮಾಡುವ ಸುರ್ರ್ ಎಂಬ ಸದ್ದನ್ನು ತುಳುವಿನಲ್ಲಿ ಸುರ್ಪ್ ಅಂತಾರೆ. ಅದೇ ಸದ್ದು ಮನುಷ್ಯರು ಮಾಡಿದರೆ ಬ್ರಿಟಿಷರು ಸ್ಲರ್ಪ್ ಅಂತಾರೆ. ಯಾರ ಕಡೆಯಿಂದ ಯಾರು ಈ ಪದವನ್ನು ಎರವಲು ಪಡೆದರು? ಇಂಥಾ ಪದಪ್ರಯೋಗಗಳ ಮೂಲ ಹುಡುಕುವ ಪ್ರಯತ್ನವೇ ವಾಗರ್ಥ ಚೂಡಾಮಣಿ. ಇದು ಈ ಸಂಚಿಕೆಯಿಂದ ಶುರುವಾಗುತ್ತಿರುವ ಹೊಸ ಅಂಕಣ. ಐಸ್ ಕ್ರೀಮ್ ತಿಂದಾಗ ತಲೆನೋವು ಬರುತ್ತಿದೆಯೇ? ‘ಸೈನ್ಸ್ ಪೇಜ’ಲ್ಲಿದೆ ಉತ್ತರ. ‘ಖಾಲಿಜೇಬು ರ್ಯಾಲಿ ಸೈಕಲ್’ ಕಾಲಂನಲ್ಲೊಂದು ಮರ್ಡರ್, ಇದು ‘ಜಾನಕಿ’ಯ ಕೈವಾಡ! ಮದುವೆಗೆ ಮುಂಚೆ ಪ್ರಾಕ್ಟಿಕಲ್ ಆಗಿದ್ದ ಹುಡುಗೀರು ಮದುವೆಯಾದ ತಕ್ಷಣ ಯಾಕೆ ಎಮೋಷನಲ್ ಆಗುತ್ತಾರೆ?. ಜಮುನಾರಾಣಿ ಬಳಿ ಉತ್ತರವಿದೆ. ಪರಮಾತ್ಮನಿಗೆ ಪ್ರಿಯವಾದ ದಾನ ಯಾವುದು? ‘ಆಚಾರ ವಿಚಾರ’ದಲ್ಲಿ ಮಾಹಿತಿಯಿದೆ. ಅಮೃತಾ ಮತ್ತು ಇಮ್ರೋಜ್ ಪ್ರೇಮಕತೆಯ ನಾಲ್ಕನೇ ಅಧ್ಯಾಯ ‘ರಾಜಧಾನಿ ಮೇಲ್’ ಅಂಕಣದಲ್ಲಿ. ‘ಒಂದು ಸೀಳಿನ ಫೋಟೋ ಹಾಕಿದ್ದಕ್ಕೆ ಚೇಳು ಕಡಿದಂತೆ ಆಡುವುದು ಹೆಣ ಕೊಯ್ಯುವವನಿಗೆ ಗಿಡ ಕೊಯ್ಯುವಾಗ ಮೈ ಬೆವರಿದಂತೆ’ ಎಂದು ಗೇಲಿ ಮಾಡಿ ಪಕಪಕಾಂತ ನಕ್ಕಿದ್ದಾರೆ ಮಹಾಶ್ವೇತ - ಈ ಅಂಕಣ ಪಡುಕೋಣೆಯೊಳಗೆ ಇಣುಕಿ ನೋಡುವವರಿಗೆ ಮಾತ್ರ. ಯಾರವಳು ಹಾಫ್ ಗರ್ಲ್ ಫ್ರೆಂಡ್? ಈ ಅನ್ವೇಷಣೆಯ ಕಾಪಿ ರೈಟ್ ನಮ್ಮದು. ಹೊಸ ಆಪಲ್ ಫೋನ್ ಒಳಗೆ ಏನೈತಿ ಅಂಥಾದ್ದೇನೈತಿ? ‘ವಾಟ್ಸಾಪ್’ ಓದಿ. ರೀಡರ್ಸ್ ಡೈಜೆಸ್ಟ್ ಕಾಲಂನಲ್ಲಿ ಶಕೀಲಾ ಆತ್ಮಕತೆಯ ಒಂದು ಭಾಗ. ಫೋಟೋ ಪೇಜಲ್ಲಿ ಹಾಲುಗಲ್ಲದ ಮಕ್ಕಳ ಕಿಲಕಿಲಾ. ಈ ಬಾರಿ ಹಬ್ಬಕ್ಕೆ ಇಷ್ಟು ಸಾಕಲ್ವ? ನೆನಪಿರಲಿ ಜಾಸ್ತಿ ತಿಂದರೆ ಹೊಟ್ಟೆಗೆ ಅಜೀರ್ಣವಾಗುತ್ತದೆ, ಆದರೆ ಜಾಸ್ತಿ ಓದಿದರೆ ಮಿದುಳಿನ ಜೀರ್ಣಶಕ್ತಿ ಜಾಸ್ತಿಯಾಗುತ್ತದೆ.
O manase