ಈಗತಾನೇ ಆಗಿದ್ದು ಮತ್ತೆ ಹೇಗಾಯ್ತು ಗುರುವೇ..? ಹಿಂದೆಂದೋ ನಡೆದ ಘಟನೆಯೊಂದು ಮತ್ತೆ ಇಂದು ನಡೆಯುವುದಕ್ಕೆ ಸಾಧ್ಯವೇ? ನಿನ್ನೆ ನೋಡಿದ ಸಿನಿಮಾವನ್ನು ಮತ್ತೆ ಇಂದು ನೋಡಿದಂತೆ, ಎಲ್ಲಾ ದೃಶ್ಯಗಳು ಮರುಕಳಿಸುವುದಕ್ಕೆ ಸಾಧ್ಯವೇ? ಜಗತ್ತಿನಾದ್ಯಂತ ಮೂವರಲ್ಲಿ ಇಬ್ಬರಿಗೆ ಇಂಥಾ ಅನುಭವವಾಗುತ್ತದೆ. ಈ ದೃಶ್ಯವನ್ನು ನಾನು ಈಗಾಗಲೇ ನೋಡಿದ್ದೇನೆ, ಅನುಭವಿಸಿದ್ದೇನೆ ಎಂಬ ದಿಗ್ಭ್ರಾಂತಿಯಿದು. ಅದನ್ನು ಫ್ರೆಂಚ್ ಭಾಷೆಯಲ್ಲಿ ಡೇಜಾವೂ ಎಂದು ಕರೆಯುತ್ತಾರೆ. ಇದೇನು ಭ್ರಮೆಯೋ, ಮಾನಸಿಕ ಅಸ್ವಸ್ಥತೆಯೋ, ಪುನರ್ ಜನ್ಮವೋ ಅಥವಾ ಆ ಭಗವಂತ ನಿಮಗೋಸ್ಕರ ನೀಡಿದ ವಿಶೇಷ ಶಾಪವೋ? ಡೇಜಾವೂ ಹಿಂದಿನ ಮರ್ಮವನ್ನು ಓದಿ ತಿಳಿಯಿರಿ. ಮಿದುಳು ಹಳಿತಪ್ಪದಿರಲು ಬೆಳಕಿನ ಸಿಗ್ನಲ್ಲು! ಹಸಿರು ಪಾಚಿಯಲ್ಲಿ ಹೇರಳವಾಗಿ ಲಭ್ಯವಿರುವ ಒಂದು ಪ್ರೋಟೀನ್ ಇದೆ. ಆ ಪ್ರೋಟೀನ್ನ ವಿಶಿಷ್ಟ ಗುಣವೆಂದರೆ ಬೆಳಕಿನ ಸಂಕೇತಗಳಿಗೆ ತೀವ್ರವಾಗಿ ಸ್ಪಂದಿಸುವುದು. ಇದನ್ನು ಜೈವಿಕ ತಂತ್ರಜ್ಞಾನದ ಮೂಲಕ ನರತಂತುಗಳ ಜೀವಕೋಶಗಳಿಗೆ ಹೊಂದಾಣಿಕೆ ಅಥವಾ ಕೂಡಿಕೆ ಮಾಡಿದರೆ, ಬೆಳಕಿನ ಸಂಕೇತಗಳಿಗೆ ಅವು ಸ್ಪಂದಿಸುವಂತೆ ಮಾಡಬಹುದು. ಆ ಮೂಲಕ ನರತಂತುಗಳಲ್ಲಿ ವಿದ್ಯುತ್ ಹರಿಯುವಂತೆ ಮಾಡಬಹುದು. ಈ ಪ್ರಯೋಗಕ್ಕೆ ಗುರಿಯಾದ ಇಲಿಗಳು ಖಿನ್ನತೆಯಿಂದ ಪಾರಾಗಿವೆ. ಮುಂದೊಂದು ದಿನ ಮನುಷ್ಯನ ಖಿನ್ನತೆ ನಿವಾರಣೆಗೂ ಇದೊಂದು ಅದ್ಭುತ ಚಿಕಿತ್ಸೆಯಾಗಬಹುದು ಅನ್ನುತ್ತಾರೆ ಹಾಲ್ದೋಡ್ಡೇರಿ ಸುಧೀಂದ್ರ. ಹೊಸ ಅಂಕಣ - ಮೂಕ ಹಕ್ಕಿಯ ಹಾಡು ಅವಳೇನೂ ತಪ್ಪು ಮಾಡಿರಲಿಲ್ಲ. ಅವಳ ತಮ್ಮ, ಮೇಲ್ಜಾತಿಯ ಅದರಲ್ಲೂ ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ ಹುಡುಗಿಯ ಜೊತೆ ನಾಲ್ಕು ಮಾತಾಡಿದ್ದೇ ತಪ್ಪಾಗಿತ್ತು. ಆ ಕಾರಣಕ್ಕೇ ಅವಳ ಮೇಲೆ ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರ ನಡೆಯಿತು. ಅಂಥಾ ಕ್ರೌರ್ಯಕ್ಕೆ ಈಡಾಗಿಯೂ ಆಕೆ ಬದುಕುಳಿದಳು. ಅಷ್ಟೇ ಅಲ್ಲ, ಒಂದು ಶಾಲೆ ತೆರೆದಳು. ಸಾವಿರಾರು ಹೆಣ್ಮಕ್ಕಳಿಗೆ ಉಚಿತ ಶಿಕ್ಷಣ ಸಿಗುವಂತೆ ಮಾಡಿದಳು. ಇದೆಲ್ಲಾ ನಡೆದದ್ದು ಪಾಕಿಸ್ತಾನದಲ್ಲಿ. ಆ ಹೆಣ್ಣಿನ ಆತ್ಮಚರಿತ್ರೆಯ ಪುಟಗಳಲ್ಲಿ ಇವೆಲ್ಲಾ ದಾಖಲಾಗಿವೆ. ಈಗ ಅದನ್ನು ಕನ್ನಡದಲ್ಲಿ ಓದುವ ಅವಕಾಶ ಓ ಮನಸೇ ಓದುಗರಿಗೆ ದೊರಕುತ್ತಿದೆ. ಈ ಸಂಚಿಕೆಯಿಂದ ಮುಖ್ತಾರ್ ಮಾಯಿಯ ಆತ್ಮಚರಿತ್ರೆ ಮೂಕಹಕ್ಕಿಯ ಹಾಡು ಆರಂಭ. ಗೋವಾದ ಕಾಮಾಟಿಪುರ - ಬೈನಾ ಬೀಚ್! ನಮ್ಮ ನಾಡಿನಲ್ಲಿ ದುರ್ದೈವದಿಂದ ಹೆಣ್ಣಾಗಿ ಹುಟ್ಟಿ ಯಲ್ಲಮ್ಮ ದೇವಿಗೆ ಭಕ್ತೆಯರಾಗಿ ದೇವದಾಸಿಯರೆಂದು ಪಟ ಕಟ್ಟಿಸಿಕೊಂಡು ಹೋಗಿ ಸೂಳೆಯರಾಗಿ ಬದುಕಿ, ಇಲ್ಲಾ ಸಾಯಿರಿ ಎಂದು ಮನೆಯಿಂದ ಹೊರ ಹಾಕಿಸಿಕೊಂಡು ಇಲ್ಲಿಗೆ ಬಂದ ಪಾಪದ ಜೀವಿಗಳು ಅವರೆಲ್ಲ. ಬೈನಾ ಬೀಚಿನಲ್ಲಿ ಬರುವ, ಹೋಗುವ ಹಡಗಿನಿಂದ ಇಳಿಯುವವರಿಗೆ ಅದು ಕಾಮಾಟಿಪುರದ ಸಮಾನ. ಯಲ್ಲಮ್ಮ ದೇವಿಯ ಮಕ್ಕಳು ಮನೆ ಮತ್ತು ಮರ್ಯಾದೆ ಎರಡನ್ನೂ ಕಳಕೊಂಡು ಬೀದಿ ಪಾಲಾಗಿರುವ ಕರುಳುಕತ್ತರಿಸುವ ವಿದ್ಯಮಾನದ ಬಗ್ಗೆ ಬರೆಯುತ್ತಾರೆ ರೇಣುಕಾ ನಿಡಗುಂದಿ. ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತ! ಹಿಂದೆ ರ್ಯಾಗಿಂಗ್ ಇದ್ದ ಜಾಗದಲ್ಲಿ ಇಂದು ಸೈಬರ್ ಬುಲ್ಲಿಯಿಂಗ್ ಎಂಬ ಕ್ರೂರ ಗೂಳಿ ಬಂದು ಕುಳಿತಿದೆ. ಇದು ಮತ್ತೇನೂ ಅಲ್ಲ, ಸರಳ ಭಾಷೆಯಲ್ಲಿ ಹೇಳುವುದಾದರೆ ಇಂಟರ್ನೆಟ್ನಲ್ಲಿ ನಡೆಯುವ ರ್ಯಾಗಿಂಗ್. ಡಿಫರೆನ್ಸ್ ಏನೆಂದರೆ, ಇಲ್ಲಿ ರ್ಯಾಗಿಂಗ್ ಮಾಡುವವರ ಮುಖವೇ ಯಾರಿಗೂ ಕಾಣಿಸುವುದಿಲ್ಲ. ಮಾಡಿಸಿಕೊಳ್ಳುವವರಿಗೆ ಅದರ ಮೂಲವೆಲ್ಲಿದೆ ಎಂಬುದೂ ತಿಳಿಯುವುದಿಲ್ಲ. ಕಾಣದೊಂದು ಹಸ್ತ ದೂರದಿಂದಲೇ ಜೀವ ಹಿಂಡುತ್ತದೆ. ಕರ್ಚೀಪಿನಲ್ಲಿ ಕ್ಲೋರೋಫಾರ್ಮ್ ಹಾಕಿ ಅಪ್ಪನಿಗೆ ಎಚ್ಚರ ತಪ್ಪಿಸಿದರೆ? ಅವಳಪ್ಪ ಕುಡುಕ. ಕುಡಿದರೆ ಭಯಂಕರ ಸೀನ್ ಕ್ರಿಯೇಟ್ ಮಾಡುತ್ತಾನೆ. ಈಗ ಅವಳಕ್ಕನಿಗೆ ಮದುವೆ ನಿಶ್ಚಯವಾಗಿದೆ. ಆ ಮದುವೆ ಅಪ್ಪನಿಗೆ ಇಷ್ಟವಿಲ್ಲ. ಹಾಗಾಗಿ ಮದುವೆದಿನ ಆತ ಕುಡಿದು ಗಲಾಟೆ ಮಾಡಿದರೆ ಗತಿಯೇನು ಅನ್ನುವುದು ಅವಳ ಚಿಂತೆ. ಅದಕ್ಕಾಗಿ ಆಕೆಯೊಂದು ಸಿನಿಮೀಯ ಐಡಿಯಾ ಹುಡುಕಿದ್ದಾಳೆ. ಕ್ಲೋರೋಫಾರ್ಮ್ ಒಂದು ಬಟ್ಟೆಯಲ್ಲಿ ತೋಯಿಸಿ ಅಪ್ಪನ ಮೂಗಿನ ಬಳಿ ಹಿಡಿಯೋದು. ಆತ ಎಚ್ಚರ ತಪ್ಪುತ್ತಾನೆ. ಮದುವೆ ಕಾರ್ಯವೆಲ್ಲ ಮುಗಿದ ಮೇಲೆ ಆತನನ್ನು ಎಬ್ಬಿಸುವುದು. ಹೀಗೆ ಮಾಡ್ಲಾ ಎಂದು ಆಕೆ ಸಮಾಧಾನ ಕಾಲಂಗೆ ಡೀಟೇಲಾಗಿ ಪತ್ರ ಬರೆದಿದ್ದಾಳೆ. ಅದಕ್ಕೆ ರವಿ ಬೆಳಗೆರೆ ನೀಡಿದ ಉತ್ತರವಾದರೂ ಏನು? ಮಂಗನ ಕುತ್ತಿಗೆಗೆ ಮರಣ ಮೃದಂಗ ಕರ್ನಾಟಕದವನು ಕನ್ನಡಿಗ, ತಮಿಳುನಾಡಿನವನು ತಮಿಳಿಗ, ನೇಪಾಳದವನು ನೇಪಾಳಿ, ಚೀನೀಯರು ಚಿಂಕಿಗಳು, ಫ್ರೆಂಚರು ಕಪ್ಪೆಗಳು -ಹೀಗೆ ಒಂದೊಂದು ಪ್ರದೇಶಕ್ಕೆ ಸೇರಿದವರಿಗೂ ಆಯಾ ಭಾಷೆ ಅಥವಾ ದೇಶದ ಹೆಸರಿನಲ್ಲಿ ಒಂದೊಂದು ಲೇಬಲ್ ಹಚ್ಚುತ್ತೇವೆ. ಆದರೆ ವಿಷಯ ಮೇಲ್ನೋಟಕ್ಕೆ ಕಾಣುವಂತೆ ಅಷ್ಟೇನೂ ಸರಳೀತವಲ್ಲ. ಕೆಲವೊಮ್ಮೆ ಇಂತಹ ದೇಶನಾಮಗಳಿಗೆ ಯಾವ್ಯಾವುದೋ ಗೊತ್ತಿಲ್ಲದ ಮೂಲಗಳೂ ಇರುತ್ತವೆ. ಕೆದಕುತ್ತಾ ಹೋದರೆ ನೂರಾರು ಪ್ರಶ್ನೆಗಳು ಧುತ್ತೆಂದು ಎದು ನಿಂತು ನಮ್ಮನ್ನು ಕನ್ಪ್ಯೂಸ್ ಮಾಡುತ್ತವೆ. ಏನಿದರ ಹಿನ್ನೆಲೆ? ವಾಗರ್ಥ ಚೂಡಾಮಣಿ ಓದಿರಿ. ಕಾಡಿನಬೆಂಕಿಯಲ್ಲಿ ಅರಳಿದ ಅಗ್ನಿಕನ್ಯೆ ಕನ್ನಡ ಸಿನಿಮಾಗಳಿಗೆ ಬಿಸಿ ಮುಟ್ಟಿಸಿದ ನಟಿಯರ ಪಟ್ಟಿಯಲ್ಲಿ ವನಿತಾವಾಸು ಹೆಸರು ಮುಂಚೂಣಿಯಲ್ಲಿದೆ. ಅದೆಂಥಾ ಇಂಟಿಮೇಟ್ ದೃಶ್ಯವಾದರೂ ವನಿತಾ ನಟನೆ ಲೀಲಾಜಾಲ. ಬಟ್ಟೆಯ ವಿಚಾರದಲ್ಲೂ ಚಿಟ್ಟೆಯೇ ಸರಿ. ಆ ಕಾರಣಕ್ಕೆ ಪ್ರೇಕ್ಷಕರ ಪಾಲಿಗೆ ವನಿತಾ ಬೋಲ್ಡ್ ನಟಿಯಾಗಿದ್ದರು. ಮಾದಕ, ರೋಚಕ, ಉನ್ಮಾದಕ ಮೊದಲಾದ ಪದಪುಂಜಗಳಿಗೆ ಪರ್ಯಾಯವೆಂಬಂತಿದ್ದ ವನಿತಾ ಕಾಲಕಳೆದಂತೆ ಗಂಭೀರ ಪಾತ್ರಗಳಲ್ಲಿ ತೊಡಗಿಸಿಕೊಂಡರು. ಮನೆಯೊಂದು ಮೂರು ಬಾಗಿಲು ಧಾರಾವಾಹಿಯಲ್ಲಿ ಆಕೆಯ ಪಾತ್ರ ಲಕ್ಷಾಂತರ ಹೆಣ್ಮಕ್ಕಳಿಗೆ ಮಾದರಿಯಾಗಿತ್ತು. ಇಂತಿಪ್ಪ ವನಿತಾವಾಸು ಕಾಡಿನಬೆಂಕಿ, ತರ್ಕ ಚಿತ್ರಗಳಲ್ಲಿ ತನ್ನ ಪಾತ್ರಗಳ ತರ್ಕಬದ್ಧವಾಗಿಯೇ ಮಾತಾಡಿದ್ದಾರೆ - ನಾನು ನನ್ನಿಷ್ಟ ಅಂಕಣದಲ್ಲಿ. ದಾಖಲೆಗಳು ಅಸಲಿಯಾಗಿದ್ದರೆ ಆಸ್ತಿ ಕೈಬಿಡೋಲ್ಲ ಬ್ಯಾಂಕುಗಳು ಸಾಲ ಕೊಡುವ ವ್ಯವಹಾರದಲ್ಲಿರುವ ಸಂಸ್ಥೆಗಳು. ಹಾಗಾಗಿ ನೀವು ಮನೆಕಟ್ಟಲು ತೆಗೆದುಕೊಳ್ಳ್ಳುವ ಸಾಲಕ್ಕೆ ನೀವೆ ಜವಾಬ್ದಾರಿ. ಈಗ ಮನೆ ಹೋದರು ನೀವು ಆ ಸಾಲ ಕಟ್ಟಲೇಬೇಕು. ನಿಜವಾಗಿ ಮನೆ ಕಳೆದುಕೊಂಡು, ಹಣ ಕಳೆದುಕೊಂಡು, ಸಾಲಗಾರರಾಗಿ ಬೀದಿಗೆ ನಿಂತಿರುವ ಆ ಅಮಾಯಕರನ್ನು ಕಾಪಾಡುವವರು ಯಾರು? ನೀವು ಮೋಸ ಹೋಗಿದ್ದೆಲ್ಲಿ? ಈ ಬಾರಿಯ ಲಾ ಪಾಯಿಂಟು ಅಂಕಣ ಓದಿರಿ. ಮನೋಲ್ಲಾಸಕ್ಕೆ ಕತೆ, ಕವನಗಳು. ಜ್ಞಾನದಿಗಂತ ವಿಸ್ತಾರಕ್ಕೆ ಸಿಂಪಲ್ ಸಯನ್ಸ್. ಪದಸಂಪತ್ತಿಗೆ ವಾಗರ್ಥ ಚೂಡಾಮಣಿ. ನೊಂದ ಮನಸ್ಸುಗಳಿಗೆ ಸಮಾಧಾನ. ಆರೋಗ್ಯ ರಕ್ಷಣೆಗೆ ಗುಣಮುಖ. ಜೀವನಸ್ಪೂರ್ತಿಗೆ ಚೈತನ್ಯದ ಚಿಲುಮೆ. ದೇವದಾನವರ ಕತೆಗಳಿಗೆ ಪುರಾಣ ಪ್ರಪಂಚ. ವೈವಿಧ್ಯಮಯ ಅಂಕಣಗಳು, ನವನವೀನ ಲೇಖನಗಳು. ಓ ಮನಸೇಯ 113ನೇ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿ.
O manase