logo

Get Latest Updates

Stay updated with our instant notification.

logo
logo
account_circle Login
O Manase
O Manase

O Manase

By: Bhavana Prakashana
20.00

Single Issue

20.00

Single Issue

About this issue

ಒಳ್ಳೆ ಅಪ್ಪ ಯಾಕೆ ಒಳ್ಳೆ ಗಂಡ ಅಲ್ಲ? ‘ಬೆಸ್ಟ್ ಹಸ್ಬೆಂಡ್’ ಎಂಬ ವ್ಯಕ್ತಿ ಇಲಿಯ ಕೋಡಿನಷ್ಟೇ ಅಪರೂಪ. ಗಂಡ-ಹೆಂಡತಿ ಎಷ್ಟು ಅನ್ಯೋನ್ಯವಾಗಿದ್ದರೂ ನಡುವೆ ಒಂದು ಅತೃಪ್ತಿಯ ರಾಜಾಕಾಲುವೆ ಹರಿಯುತ್ತಿರಲೇಬೇಕು. ಇಲ್ಲದಿದ್ದರೆ ಅದಕ್ಕೆ ಮದುವೆ ಎನ್ನುವುದಿಲ್ಲ. ಮಗು ಹುಟ್ಟಿದ ದಿನವೇ ನನ್ನ ಗಂಡ ಕಳೆದುಹೋದ ಅನ್ನುವುದು ಎಲ್ಲಾ ಹೆಂಡತಿಯರ ಕಂಪ್ಲೇಂಟು. ಇಷ್ಟಕ್ಕೂ ಒಳ್ಳೆಯ ಅಪ್ಪ ಹಾಗೂ ಒಳ್ಳೆಯ ಗಂಡ ಒಬ್ಬನಲ್ಲೇ ಇರಲು ಸಾಧ್ಯವಿಲ್ಲವಾ? ಹೆಂಡತಿಗೆ ಒಳ್ಳೆಯ ಗಂಡನಾಗದವನು ಮಗುವಿಗೆ ನಿಜವಾಗಿಯೂ ಒಳ್ಳೆಯ ಅಪ್ಪ ಹೇಗಾಗುತ್ತಾನೆ? ನಾಳೆ ನನ್ನ ಮಗನಿಗೆ ಇವನು ಏನು ಕಲಿಸುತ್ತಾನೆ? ಇವನ ಗರಡಿಯಲ್ಲಿ ಬೆಳೆದ ಮಗ ತನ್ನ ಹೆಂಡತಿಯನ್ನೂ ಹೀಗೇ ನೋಡಿಕೊಳ್ಳುತ್ತಾನಾ? ಜಗತ್ತಿನ ಮುಕ್ಕಾಲು ಪಾಲು ಹೆಂಡತಿಯರ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಈ ಲೇಖನ. ಅಪ್ಪ ಆಗಿದ್ದೇ ತಪ್ಪಾ! ಸಾವಿನೊಂದಿಗೆ ಕುಳಿತು ಎರಡು ಪೆಗ್ ವಿಸ್ಕಿ ಹೀರಿ ಕೊನೆಯ ವಿದಾಯ ಹೇಳಿದವರು ಖುಶ್ವಂತ್ ಸಿಂಗ್. ಅವರು ಇಹಲೋಕವನ್ನು ತ್ಯಜಿಸಿದಾಗ ದೆಹಲಿಯಲ್ಲಿ ನಿಗಿನಿಗಿ ಕೆಂಡದಂತ ಫಲಾಶದ ಹೂಗಳು ಉದುರಿ ಇಡಿ ನೆಲವೆಲ್ಲ ಕೆಂಪು ಹೂಹಾಸಿನಂತೆ ಅಂಟಂಟಾಗಿ ಮಲಗಿತ್ತು. ಮನುಷ್ಯ ಹೃದಯ ಬಯಸುವ ಎಲ್ಲ ಪ್ರೇಮ-ಕಾಮನೆಗಳೆಲ್ಲವನ್ನೂ ರಮ್ಯವಾಗಿ ಬರೆದವರು ಖುಶ್ವಂತ್ ಸಿಂಗ್, ಬರೆಯುವ ಸುಖವನ್ನು, ಸುಖದಲ್ಲಿನ ಸಂತೋಷವನ್ನು ಓದುಗರೊಂದಿಗೆ ಅನುಭವಿಸುತ್ತಲೇ ನಡೆದರು. ಕಳೆದ ಮಾರ್ಚ್ ೨೦ರಂದು ಸುಮ್ಮನೇ ಲಾಹೋರಿಗೆ ಹೋಗುವವರಂತೆ ಎದ್ದುಹೋದ ಅವರ ನೆನಪಲ್ಲೊಂದು ಆತ್ಮೀಯ ಬರಹ ಇಲ್ಲಿದೆ. ನನ್ನ ಪ್ರೀತಿಯ ಖುಷ್ವಂತ್ ಸಿಂಗ್ ಭಾಷೆಯ ಹೆಜ್ಜೆಯೇ ಹಾಗೆ. ಅದು ಎಲ್ಲಿ ಹುಟ್ಟಿ ಹೇಗೆ ಹಬ್ಬುತ್ತದೆ, ಯಾವ ನೆಲದಲ್ಲಿ ಬೇರಿಳಿಸಿ ಯಾವ ಚಪ್ಪರದಲ್ಲಿ ಹೂ ಬಿಡುತ್ತದೆ ಹೇಳುವುದು ಕಷ್ಟ. ಇಂಗ್ಲೀಷಿನಲ್ಲಿ ಸೆರೆಂಡಿಪಿಟಿ (ಖಛ್ಟಿಛ್ಞಿbಜಿmಜಿಠಿqs) ಎಂಬೊಂದು ಪದ ಇದೆ. ದುಷ್ಯಂತನಂತೆ ಎಲ್ಲಿಗೋ ಹೊರಟಿರುತ್ತೀರಿ. ಬೇಟೆಯಾಡಲು ಹೋದವರಿಗೆ ದಾರಿ ತಪ್ಪುತ್ತದೆ. ಆಶ್ರಮ ಸಿಗುತ್ತದೆ. ಅಲ್ಲೊಬ್ಬಳು ಚೆಲುವಾದ ಕನ್ಯೆ ನಿಮಗಾಗಿಯೇ ಕಾದಿದ್ದಳೋ ಎಂಬಂತೆ ಕೂತಿರುತ್ತಾಳೆ. ಒಟ್ಟಲ್ಲಿ ಚಿಗರೆ ಸಿಗದಿದ್ದರೂ ಚಿಗರೆ ಕಂಗಳ ಶಕುಂತಲೆಯನ್ನು ಕಾಣುತ್ತೀರಿ, ಕೂಡುತ್ತೀರಿ. ಅದು ಸೆರೆಂಡಿಪಿಟಿ. ಇದೇ ರೀತಿ ಪ್ರತಿ ಹೆಸರಿನ ಹಿಂದೆ, ಜಾಗದ ಹಿಂದೆ ಒಂದು ಕತೆಯಿರುತ್ತದೆ. ಏನದು? ವಾಗರ್ಥ ಚೂಡಾಮಣಿಯಲ್ಲಿದೆ ಈ ಪ್ರಶ್ನೆಗೆ ಉತ್ತರ. ಜ್ಯಾಕ್‌ಫ್ರೂಟ್‌ನೊಳಗೆ ಜ್ಯಾಕ್ ಎಲ್ಲಿಂದ ಬಂದ? ಅಮೆಜಾನ್‌ನಲ್ಲಿ ಲಕ್ಷಗಟ್ಟಲೆ “kindle books" ಇವೆ. ಪೂರ್ತಿ ಎರಡು ಸಾವಿರ ಪುಟಗಳದೊಂದು ಪುಸ್ತಕ ಆಯ್ಕೆ ಮಾಡಿಕೊಂಡಿರಿ ಅಂತಲೇ ಇಟ್ಟುಕೊಳ್ಳಿ. ಅದು wireless ವಿಧಾನದ ಮೂಲಕ ಒಂದಕ್ಷರವೂ ಬಿಡದೆ ಸರಿಯಾಗಿ ಅರವತ್ತು ಸೆಕೆಂಡ್‌ಗಳಲ್ಲಿ ಬಂದು ನಿಮ್ಮ ಕಂಪ್ಯೂಟರ್‌ನೊಳಕ್ಕೆ ಬಂದು ಬಿದ್ದು ಬಿಡುತ್ತದೆ! ಇದಕ್ಕಿಂತ ಭಾಗ್ಯ ಬೇಕೆ? ನೀವು ನೋಡುತ್ತಿರಿ. ಜಗತ್ತಿನಲ್ಲಿ ಇನ್ನೂ ಅಳಿದುಳಿದ ಲೈಬ್ರರಿಗಳಿದ್ದರೆ ಅವೂ ಮುಚ್ಚಿ ಹೋಗುತ್ತವೆ. ಸಾವಿರಾರು ಪುಸ್ತಕಗಳನ್ನು ತಂದು ನಿಮ್ಮ ರ್‍ಯಾಕ್‌ಗಳಲ್ಲಿ ಒಟ್ಟಿಕೊಳ್ಳುವ ಸೀನ್ ಇಲ್ಲವೇ ಇಲ್ಲ. ಅವೆಲ್ಲ ಸಾವಿರಗಟ್ಟಲೆ ಪುಸ್ತಕಗಳನ್ನು ಒಂದು I padನಲ್ಲಿ ಬಸಿದಿಟ್ಟುಕೊಂಡುಬಿಡಬಹುದು. ಹೀಗೆ ಕಾಲದ ಜೊತೆ ಓಡಾಡಬೇಕಾದ ಅನಿವಾರ್ಯದ ಬಗ್ಗೆ ಮನಸಿನ್ಯಾಗಿನ ಮಾತು ಅಂಕಣದಲ್ಲಿ ರವಿ ಬೆಳಗೆರೆ ಬರೀತಾರೆ. ಯಾವ ಗಾಳಿ ಯಾವ ಕಡೆಯಿಂದ ಅದ್ಯಾವ ಬಿರುಸಿನೊಂದಿಗೆ ಬೀಸಿ ಬರುತ್ತೋ? ಮತ್ತೆ ಬಂದಿದೆ ಯುಗಾದಿ, ಹಿಂದೂಗಳ ಪಾಲಿಗೆ ಹೊಸವರ್ಷದ ಆರಂಭ. ಈ ಸಂವತ್ಸರ ಮನ್ಮಥ ಸಂವತ್ಸರ. ಮನ್ಮಥ ಕಾಮಸ್ವರೂಪಿ. ಕಾಮ ಅತಿಯಾಗಿ ವಿಜೃಂಭಿಸಿದಾಗ ಶಿವನಿಂದ ಹರಣವಾಗುತ್ತೆ. ಈ ಮನ್ಮಥ ಸಂವತ್ಸರ ಕಾಮದಾಯಕವಾಗಿರದೆ, ನಿಕ್ಷಾಮದಾಯಕವಾಗಲೀ ಅಂದುಕೊಂಡರೂ ಸಾಧ್ಯವಾಗುವುದಿಲ್ಲವೇನೋ. ಕಾರಣ ಈ ವರ್ಷ ಪ್ರಾರಂಭವಾಗಿರೋದು ಶನಿವಾರದಂದು. ಈ ಬಾರಿ ಶನಿ ರಾಜ. ಮಂತ್ರಿ ಕುಜ ಗ್ರಹ. ಇವೆರಡೂ ಪಾಪ ಗ್ರಹಗಳೇ. ರಾಜ-ಮಂತ್ರಿಗಳಿಬ್ಬರೂ ಇಂಥವರಾಗಿರುವಾಗ ಲೋಕದ ಗತಿ ಶಿವನೇ ಬಲ್ಲ ಅನ್ನುತ್ತಾರೆ ನಮ್ಮ ಆಚಾರ ವಿಚಾರ ತಜ್ಞರು. ಇದು ಮನ್ಮಥ ಸಂವತ್ಸರ ಸರ್ಕಾರಗಳು ತಮ್ಮಲ್ಲಿ ಅಧಿಕಾರವಿದೆ ಎಂಬ ಏಕೈಕ ಕಾರಣಕ್ಕೆ ಎಲ್ಲವನ್ನೂ ತಾನೇ ನಿರ್ಧರಿಸುತ್ತೇನೆ ಅನ್ನುವುದಿದೆಯಲ್ಲ, ಅದನ್ನು ಸರ್ವಾಕಾರ ಎನ್ನುತ್ತೇವೆ. ಸಂಘ-ಸಂಸ್ಥೆಗಳು ತಮಗೆ ತೋಚಿದಂತೆ ನಿಯಮ ರೂಪಿಸಿಕೊಳ್ಳುತ್ತೇವೆ ಅನ್ನುವುದಿದೆಯಲ್ಲ, ಅದು ದುರಹಂಕಾರವಾಗುತ್ತದೆ. ಹಾಗೆಯೇ, ಜನರು ತಮಗೆ ತೋಚಿದಂತೆ ಏನು ಬೇಕಾದರೂ ಮಾಡುತ್ತೇವೆ ಅನ್ನುವುದಿದೆಯಲ್ಲ, ಅದು ಸ್ವೇಚ್ಛಾಚಾರವಾಗುತ್ತದೆ. ಈ ಕಾರಣಕ್ಕೇ ನಮ್ಮ ದೇಶವಾಸಿಗಳಿಗೆ ಸದಾ ಇದೊಂದು ಪ್ರಾಬ್ಲಮ್ ಕಾಡುತ್ತಲೇ ಇರುತ್ತದೆ. ಏನದು? ನಿಮ್ಮಿಷ್ಟದಂತೆ ಬದುಕುವುದನ್ನು ನಿಷೇಸಲಾಗಿದೆ! ನಾನಿದನ್ನೆಲ್ಲ ಯಾಕೆ ಮಾಡುತ್ತಿದ್ದೇನೆ ಎಂದು ಕೇಳಿಕೊಳ್ಳಲು ಆರಂಭಿಸಿದೊಡನೆ ನಮ್ಮ ಕ್ರಿಯೆ ಸಡಿಲವಾಗುತ್ತಾ ಹೋಗುತ್ತದೆ. ವೈರಾಗ್ಯ ನಮ್ಮನ್ನು ಆವರಿಸಿಕೊಳ್ಳುತ್ತಾ ಬರುತ್ತದೆ. ನಿರರ್ಥಕತೆ ಅನ್ನುವುದು ನಮ್ಮನ್ನು ಆವರಿಸಿಕೊಳ್ಳುವುದಕ್ಕೆ ಬಿಡಬಾರದು. ಬದುಕುತ್ತಾ ಹೋಗಬೇಕು. ನಿರರ್ಥಕತೆ ಹುಟ್ಟುವುದು ವರ್ತಮಾನದಲ್ಲಿ ಅಲ್ಲ, ಭವಿಷ್ಯದಲ್ಲಿ ಅನ್ನುವುದನ್ನು ನಾವು ಮರೆಯುವಂತಿಲ್ಲ. ಹಾಗನ್ನುತ್ತಲೇ ಜಾನಕಿ ಒಂದು ಗಂಭೀರ ಪ್ರಶ್ನೆಯನ್ನೂ ಕೇಳುತ್ತಾರೆ. ಅಷ್ಟಕ್ಕೂ ನಿಮ್ಮ ಅಪ್ಪ ಅಮ್ಮ ಏನು ಸಾಧನೆ ಮಾಡಿದ್ದಾರೆ? ಇದು ಈ ಬಾರಿಯ ಯುಗಾದಿ ಹಬ್ಬಕ್ಕೆ ‘ಓ ಮನಸೇ’ಯ ಹೂರಣ. ಸಮೃದ್ಧ ಲೇಖನಗಳು, ಪ್ರಬುದ್ಧ ವಿಚಾರಗಳು, ನೆಮ್ಮದಿ ನೀಡುವ ಸಮಾಧಾನ, ಕೆಣಕುವ ಮತ್ತು ಸಂತೈಸುವ ಅಂಕಣಗಳು, ಮೊದಲ ಪ್ರೇಮಪತ್ರಗಳ ಕೊನೆಯ ಕಂತು, ಇನ್ನೂ ಏನೇನೋ ಇದೆ. ನೀವು ಕೊಂಡುಕೊಂಡು ಓದಿದರೆ ಗೊತ್ತಾಗುತ್ತದೆ. ‘ಓ ಮನಸೇ’ಯ ಯುಗಾದಿ ವಿಶೇಷವನ್ನು ಇಂದೇ ಓದಿ ಧನ್ಯರಾಗಿರಿ. ಇದು ಓದಿನ ಹಬ್ಬ.

About O Manase

O manase