Buy Now @ ₹ 15.00
Preview
ಸೃಷ್ಟಿ 1036 : ಸಂಪುಟ 20, ಸಂಚಿಕೆ 48, ಆಗಸ್ಟ್ 27, 2015
ಖಾಸ್‌ಬಾತ್
ನೆತ್ತಿ ನೇವರಿಸಿದರೆ ಅವೆಷ್ಟು ನೆನಪುಗಳು ಗರಿಗೆದರಿ ನಿಲ್ಲುತ್ತವೋ ಕಾಣೆ!
ಹೊರಗೆ ಜಿಟೀ ಅಂತ ಮಳೆ. ನಿನ್ನೆ ಒಳ್ಳೆ ರಭಸದಲ್ಲೇ ಬಿತ್ತು. ಇದಿನ್ನೇನು ಪ್ರಾಣ ತೆಗೆದೇ ಬಿಡುತ್ತೆ ಎಂಬಂಥ ತೀವ್ರ ತೀವ್ರ ಬಿಸಿಲು ನೋಡಿದ್ದೇನೆ. ಬಿಸಿಲಿನ ತೀವ್ರತೆಯನ್ನು ದಂಗು ಬಡಿದು ನಿಂತು ನೋಡಿದ್ದು, ದುಬೈನಲ್ಲಿ. ಭಾರತದ ಬಿಸಿಲಿಗೂ ಆ ಅರಬ್ಬಿಗಳ ಬಿಸಿಲಿಗೂ ಹೋಲಿಸಲೇ ಬೇಡಿ. ಅಲ್ಲಿನ ಬಿಸಿಲು ಮರ್ಡರಸ್. ಕೂಲಿಗಳು ಅದ್ಯಾವುದೋ ಐವತ್ತೇಳನೆಯ ಫ್ಲೋರ್‌ನ ಕಿಟಕಿಯಲ್ಲಿ ನಿಂತು ಕೆಲಸ ಮಾಡುತ್ತಿರುತ್ತಾರೆ. ಸರಿ, ಕೆಲಸ ನಡೀತಿದೆಯಲ್ಲಾ ಅಂದುಕೊಂಡು ಅತ್ತಿತ್ತ ನೋಡುವಷ್ಟರಲ್ಲಿ ಒಂದು ಧಬ್ಬೆನ್ನುವ ಶಬ್ದ. Finish! ಪರಿಶೀಲಿಸಿ ನೋಡುವ ಪ್ರಶ್ನೆ ಇಲ್ಲವೇ ಇಲ್ಲ. ಸತ್ತವನು ಇಂಡಿಯಾದವನಾ ಪಾಕಿಸ್ತಾನಿಯಾ ಫಿಲಿಪೈನ್ಸ್‌ನವನಾ ಅಷ್ಟು ಕೇಳಿ ಸಾಕು. ಅದು ನಿರ್ದಯಿ ಹಂತಕನ ಒಂದು ಬೀಸು. ಇಂತಿಷ್ಟು ಹೊತ್ತು ಅಂತ ನಿಗದಿ ಮಾಡಲಾಗಿರುತ್ತದೆ. ಕೂಲಿಯು ಕೆಲಸ ಆರಂಭಿಸಿದಾಗಿನಿಂದ ಇಂತಿಷ್ಟು ಹೊತ್ತಿಗೆ ಕೊಡಬೇಕು ಅಂತ indicate ಆಗಿರುತ್ತದೆ. ಸೂಪರ್ ವೈಸರ್ ಥರದವನು ಬಂದು ಕೊಟ್ಟೂ ಕೊಡುತ್ತಾನೆ. ಎಂಥವೋ ಮಾತ್ರೆಗಳ ಜೊತೆಗೆ ಕೊಂಚ ಗ್ಲೂಕೋಸು, ಅದು ಇದು ಕೊಟ್ಟು ಹೋಗುತ್ತಾನೆ. ಆನಂತರ, ಇಂತಿಷ್ಟು ಹೊತ್ತಿನ ತನಕ ಅವನು ಕಿಟಕಿ ಬಳಿ ನೇತಾಡುತ್ತಾ ಕೆಲಸ ಮಾಡಲಿಕ್ಕೆ ಅಡ್ಡಿ ಇಲ್ಲ. ಆದರೆ ಪ್ರತಿನಿತ್ಯದ ಈ ಸರಣಿಯಲ್ಲಿ ಎಲ್ಲೋ ಒಂದು ಯಡವಟ್ಟಾಗುತ್ತದೆ. ಐವತ್ತೇಳನೆಯ ಫ್ಲೋರ್‌ನಿಂದ ಅವನು ಆಯತಪ್ಪಿ ಕೆಳಕ್ಕೆ ಬೀಳುತ್ತಾನೆ. ಓಡಿ ಹೋಗಿ ನೋಡಲಿಕ್ಕೆ ಅಲ್ಲೇನಿದೆ ಬಿದ್ದವನಿಗೆ ಗೊತ್ತಾಗುವುದಕ್ಕಿಂತ ಮೊದಲೇ ಪ್ರಾಣ ಹೋಗಿರುತ್ತದೆ. ಅದಕ್ಕೇನು ಭಾರತ, ಪಾಕಿಸ್ತಾನ್, ಫಿಲಿಪೈನ್ಸ್- ವ್ಯತ್ಯಾಸಗಳಿವೆಯಾ ಆಯತಪ್ಪಿದ ಮೇಲೆ ಬೀಳುವುದು ಗ್ಯಾರಂಟಿ. ಬಿದ್ದ ಮೇಲೆ ಸಾವು ಗ್ಯಾರಂಟಿ. Thats all. ಅಲ್ಲೆಲ್ಲೋ ಕರಾಚಿಯ ಕೊಳಗೇರಿಯಲ್ಲಿ, ಅದ್ಯಾರೋ ಶಬನಮ್ ನಿಟ್ಟುಸಿರಿಟ್ಟಿರುತ್ತಾಳೆ. ವೈಧವ್ಯ ಬಂತೆಂಬ ಸುದ್ದಿ ಅದಿನ್ನೆಷ್ಟೋ ಹೊತ್ತಿಗೆ ಅವಳಿಗೆ ತಲುಪುತ್ತದೆ. ನಾನಿದ್ದ ನಾಲ್ಕಾರು ದಿನಗಳಲ್ಲೇ ಈ ತೆರನಾದ ಸಾವುಗಳನ್ನು ನೋಡಿದ್ದೇನೆ.
ರವಿ ಬೆಳಗೆರೆ
ಸಾಫ್ಟ್‌ಕಾರ್ನರ್
ಅಕ್ಕಪಕ್ಕದಲ್ಲೇ ಮಲಗಿ ಸುಖಿಸುವ ಜೀವನ ಯಾನ
ಒಂದು ಹಿಂಟ್ ಕೂಡ ಕೊಡದೆ ಸರ್ಪ್‌ರೈಸ್ ಕೊಡೋದು ಈ ಹುಡುಗಿ ನಿವೇದಿತಾಳಿಂದಲೇ ಕಲೀಬೇಕು. ಕೆಲ ದಿನಗಳ ಹಿಂದೆ ಅವಳು ಗುಲ್ಜಾರ್ ಸಾಹೇಬರ ‘ಪ್ಲೂಟೋ ಕವನ ಸಂಕಲನ ನನಗೋಸ್ಕರ ಖರೀದಿಸಿ ತಂದುಕೊಟ್ಟಿದ್ದಳು. ಪುಸ್ತಕ ಕೊಟ್ಟರೆ ಯಾವತ್ತಿಗೂ ನನಗದು ಇಷ್ಟವೇ. ಆದರೆ ಕೈಲಿ ಹಿಡಿದ ತಕ್ಷಣ ಬೆಚ್ಚಿಬಿದ್ದೆ. ಮೊಟ್ಟ ಮೊದಲ ಪುಟದಲ್ಲೇ ಗುಲ್ಜಾರ್ ಅವರ ಸಹಿ! ‘Yes boss. ಅವರದೇ ಸಿಗ್ನೇಚರ್. ಅವರಿಗೋಸ್ಕರವೇ ಮದ್ರಾಸಿಗೆ ಹೋಗಿದ್ದೆ. ಅಲ್ಲಿ ಕವಿ ಸಮ್ಮೇಳನಕ್ಕೆ ಅವರು ಬಂದಿದ್ದರು. ಶುಭ್ರಕ್ಕಿಂತ ಶುಭ್ರವಾದ ಬಿಳೀ ಪಾಯಜಾಮಾ ಜುಬ್ಬಾ ಹಾಕ್ಕೊಂಡಿದ್ರು. He was looking great. ನೀವು ಸಾವಿರ ಸಲ ನೆನಪಾದಿರಿ ಅಂದಳು. ಅವಳ ಗಂಡನ ಮನೆ ಇರೋದು ಆಂಧ್ರದ ಗೂಡೂರಿನಲ್ಲಿ. ಅದು ಶ್ರೀಹರಿಕೋಟದ ಪಕ್ಕದಲ್ಲಿದೆ. ಅಲ್ಲಿಂದ ನಲವತ್ತು ಕಿಲೋಮೀಟರ್ ದೂರಲ್ಲಿ ಮದ್ರಾಸು. ನಿವೀಗೆ ಒಂದು ಶುಭಾಶೀರ್ವಾದ’ ಅಂದೆ. ಅರ್ಧ ದಿನಕ್ಕೆ ಮುಂಚಿತವಾಗಿ ಹೇಳಿದ್ದಿದ್ದರೆ ನಾನೂ ಹೋಗಿಬಿಡುತ್ತಿದ್ದೆ.
ರವಿ ಬೆಳಗೆರೆ
ಬಾಟಮ್ ಐಟಮ್
ಇಮೇಜ್ ಎಂಬುದು ಒಲಿದರೆ ಲಕ್ಷ್ಮಿ, ಮುನಿದರೆ ಶನಿ
ನನಗೊಂದು ಇಮೇಜ್ ಇದೆ. ಪತ್ರಕರ್ತ, ಬರಹಗಾರ, ಕಥೆಗಾರ ಇತ್ಯಾದಿ. ಇದು ಓದುಗರು ಕೊಟ್ಟಿದ್ದೋ ಅಥವಾ ನಾನೇ ಸಂಪಾದಿಸಿದ್ದೋ ಅಥವಾ ತಾನಾಗಿ ಬಂದಿದ್ದೋ ಅನ್ನುವುದರ ಬಗ್ಗೆ ನಾನು ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ. ಸಾರ್ವಜನಿಕ ಬದುಕಲ್ಲಿ ಕೊಂಚ ಹೆಸರು ಮಾಡಿರುವವರೆಲ್ಲರಿಗೂ ಇಂಥಾದ್ದೊಂದು ಇಮೇಜ್ ಇದ್ದೇ ಇರುತ್ತದೆ. ನಮಗೆ ಇಷ್ಟವಿರಲಿ, ಇಲ್ಲದೇ ಇರಲಿ ಆ ಇಮೇಜ್ ಜೊತೆ ನಾವು ಬದುಕಬೇಕು. ಸಾಧ್ಯವಾದಷ್ಟು ಅದು ಕೆಡದಂತೆ ನೋಡಿಕೊಳ್ಳಬೇಕು. ಇಮೇಜ್ ಅನ್ನುವುದು ಜನಪ್ರಿಯತೆ ತಂದೊಡ್ಡುವ ಹಲವಾರು ಸಂಕಷ್ಟಗಳಲ್ಲಿ ಒಂದು. ಅದನ್ನು ನಿಭಾಯಿಸಬೇಕು, ಅದರ ಜೊತೆ ಹೆಣಗಬೇಕು, ಅದನ್ನು ಉಳಿಸಿಕೊಳ್ಳಬೇಕು. ಯಾಕೆಂದರೆ ನಮ್ಮ ಇಮೇಜ್ ಕೆಟ್ಟುಹೋದರೆ ಅದರ ಪರಿಣಾಮ ನಮ್ಮ ವೃತ್ತಿಯ ಮೇಲಾಗುತ್ತದೆ, ನಾವೇ ಕಟ್ಟಿದ ಸಂಸ್ಥೆಯ ಮೇಲಾಗುತ್ತದೆ, ಅದನ್ನೇ ನಂಬಿಕೊಂಡಿರುವ ನೂರಾರು ಜನರ ಮೇಲಾಗುತ್ತದೆ, ನಮ್ಮ ಮನೆಯವರ ಮೇಲಾಗುತ್ತದೆ, ಶ್ರದ್ಧೆಯಿಂದ ಕಟ್ಟಿದ ಒಂದು ವ್ಯವಸ್ಥೆಯೇ ಬುಡಮೇಲಾಗುತ್ತದೆ.
ರವಿ ಬೆಳಗೆರೆ
ಹಲೋ
ಜಾಗತೀಕರಣದ ದೈತ್ಯ ರಸ್ತೆಯಲ್ಲಿ ಶೋಷಿತರಿಗೆ ನಡೆದಾಡುವ ಶಕ್ತಿ ದಕ್ಕಬೇಕು
ದಿವಂಗತ ಮುಖ್ಯಮಂತ್ರಿ ದೇವರಾಜ ಅರಸರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಅನ್ನಿಸುತ್ತಿದೆ. ಮೊದಲನೆಯದಾಗಿ ದೇವರಾಜ ಅರಸು ಹಿಂದುಳಿದ ವರ್ಗಗಳ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ತಮ್ಮ ಕಾರ್ಯಕ್ರಮಗಳ ಮೂಲಕವಾದರೂ, ಅಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವುದರಲ್ಲಿ ಅವರ ರಾಜಕೀಯ ಲಾಭವೂ ಅಡಗಿತ್ತು. ಹೀಗೆ ರಾಜಕೀಯ ಲಾಭ ಅಡಗಿದ್ದರೂ ಅವರ ಕಾರ್ಯಕ್ರಮಗಳಿಂದ ಈ ನಾಡಿನ ಶೋಷಿತ ವರ್ಗಗಳಿಗೆ ಅನುಕೂಲವಾಗಿದ್ದು, ಆರ್ಥಿಕ ಮತ್ತು ರಾಜಕೀಯ ಅಧಿಕಾರದ ಹಂಚಿಕೆಯಾಗಿದ್ದು ನಿಜ.
ರವಿ ಬೆಳಗೆರೆ
ಮುಖಪುಟ ವರದಿ
ಸತ್ತ ದನದ ಸುತ್ತ ಹಸಿದ ಖೂಳರ ಹಿಂಡು!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಸ್ಪರ್ಧೆ ಮಾಡುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿ ತಾನೇ ಗೆದ್ದು ಬರುತ್ತೇನೆ ಅನ್ನುವ ರೀತಿಯಲ್ಲಿ ವರ್ತಿಸತೊಡಗಿದ್ದಾನೆ. ವಿಪರ್ಯಾಸದ ಸಂಗತಿಯೆಂದರೆ ಈ ಬಾರಿಯ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವವರ ಪೈಕಿ ಹಲವರು ರೌಡಿಗಳು, ಕೊಲೆಗಡುಕರು ನಿಂತಿದ್ದಾರೆ. ಬರಗೆಟ್ಟ ಪಾಲಿಕೆಗೆ ದೊಡ್ಡ ಕೂಳುಬಾಕರ ಹಿಂಡೇ ಬರತೊಡಗಿದೆ. ಕಳೆದ ಬಾರಿ ನೂರಾ ಹತ್ತಕ್ಕೂ ಅಧಿಕ ಸೀಟುಗಳನ್ನು ಪಡೆದಿದ್ದ ಬಿಜೆಪಿಯು ಈ ಬಾರಿ ಇಪ್ಪತ್ತರಿಂದ ಇಪ್ಪತ್ತೈದು ಸೀಟುಗಳನ್ನು ಕಳೆದುಕೊಳ್ಳುವ ವಾತಾವರಣವಿದೆ. ಅದಕ್ಕೆ ಕಾರಣ ಬಿಜೆಪಿ ಪಾಲಿಕೆಯಲ್ಲಿ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರ. Actually, ಬಿಬಿಎಂಪಿ ರಚನೆಯಾಗಿದ್ದೇ ಬಿಜೆಪಿ ಅವಧಿಯಲ್ಲಿ. ಅಧಿಕಾರಕ್ಕೆ ಬಂದ ಬಿಜೆಪಿ ವರ್ಷಕ್ಕೊಬ್ಬರು ಮೇಯರ್ ಆಗುವಂತೆ ನೋಡಿಕೊಂಡಿತೇ ವಿನಾ ಅಭಿವೃದ್ಧಿ ಕಡೆ ಗಮನ ಹರಿಸಲಿಲ್ಲ. ಪರಿಣಾಮ, ಹಿಂದೆಂದೂ ಕಾಣದ ರೀತಿಯಲ್ಲಿ ಕಸದ ಸಮಸ್ಯೆ, ವಿಪರೀತ ಭ್ರಷ್ಟಾಚಾರ, ಬಿಲ್ ಬಾಕಿ, ಗುತ್ತಿಗೆದಾರರ ಮುಷ್ಕರ ಹೀಗೆ ಹತ್ತಾರು ಸಮಸ್ಯೆಗಳನ್ನ ಹೊತ್ತುಕೊಂಡೇ ಬಿಜೆಪಿ ಮೊದಲ ಟರ್ನ್ ಮುಗಿಸಿತು. ಅದರ ಹೊಡೆತ ಈಗ ಕಾಣುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ಸ್ಪಷ್ಟ ಬಹುಮತ ಬಾರದಂತಹ ಪರಿಸ್ಥಿತಿ ತಲುಪಿದೆ. ಹಾಗೊಂದು ವೇಳೆ ಬಿಜೆಪಿಯೇನಾದರೂ ಬಿಬಿಎಂಪಿಯ ಅಧಿಕಾರ ಚುಕ್ಕಾಣಿ ಹಿಡಿದಿದ್ದೇ ಆದಲ್ಲಿ ಮುಂದೆ ಕೆಲವೇ ತಿಂಗಳಲ್ಲಿ ಮತ್ತೆ ಚುನಾವಣೆ ಎದುರಿಸಬೇಕಾದಂತಹ ವಾತಾವರಣ ಕೂಡ ಕಾಂಗ್ರೆಸ್ ಸೃಷ್ಟಿಸಿದೆ. ಇದಕ್ಕೆ ನೆಪವಾಗಿರುವುದು ಬಿಬಿಎಂಪಿ ವಿಭಜನೆ.
ಲೋಕೇಶ್ ಕೊಪ್ಪದ್
ರಾಜಕೀಯ
ಯಡ್ಡಿ-ಅನಂತಿ ನಡುವಣ ಸಂಘರ್ಷ ಅಶೋಕ್‌ಗೆ ಲಿಂಗಾಯತ ವಿರೋಧಿ ಎಂಬ ಸ್ಪರ್ಶ
ಅಶೋಕ್ ಅವರನ್ನು ಯಾವ ಕಾರಣಕ್ಕಾಗಿ ಲಿಂಗಾಯತ ವಿರೋಧಿ ಎಂದು ಪ್ರತಿಬಿಂಬಿಸುವ ಕೆಲಸ ನಡೆಯಿತು ಎಂಬುದನ್ನು ಗಮನಿಸಲು ಹೊರಟರೆ ಕಣ್ಣಿಗೆ ಕಾಣುವುದು ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನ. ಅಂದ ಹಾಗೆ ಹಾಲಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಇನ್ನು ಕೆಲವೇ ಕಾಲದಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರೈಸಲಿದ್ದಾರೆ. ಈ ಜಾಗಕ್ಕೆ ಬರಲು ಇಬ್ಬರು ನಾಯಕರು ನಿರಂತರ ಪೈಪೋಟಿ ನಡೆಸುತ್ತಿರುವುದು ರಹಸ್ಯವೇನಲ್ಲ. ಈ ಪೈಕಿ ಒಬ್ಬರು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮತ್ತೊಬ್ಬರು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್. ಅದೇ ರೀತಿ ಮರಳಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಹಿಡಿದು ಇನ್ನೊಮ್ಮೆ ಸಿಎಂ ಆಗಬೇಕು ಎಂಬ ಲೆಕ್ಕಾಚಾರ ಯಡಿಯೂರಪ್ಪನವರಲ್ಲಿದೆ. ಸದ್ಯಕ್ಕೆ ಅವರಿಗೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆಯಾದರೂ ಅವರು ಆಂಧ್ರದ ವೆಂಕಯ್ಯ ನಾಯ್ಡು ಥರ ಬೇಸ್ ಲೆಸ್ ರಾಜಕಾರಣಿಯೇನಲ್ಲ. ಹಾಗೆಯೇ ಅವರಂತೆ ದೇಶ ಸುತ್ತಿ ಇಂಗ್ಲಿಷು, ಹಿಂದಿಯಲ್ಲಿ ಪರಿಣಿತರಂತೆ ಮಾತನಾಡಲು ಸಾಧ್ಯವೂ ಇಲ್ಲ.
ಆರ್.ಟಿ.ವಿಠ್ಠಲಮೂರ್ತಿ
ವರದಿ
ಉಡುಪಿಯ ಸೀಕ್ರೆಟ್ ಬಂಗಲೆಯಲ್ಲಿ ಬನ್ನಂಜೆ ರಾಜ!
ಬನ್ನಂಜೆಯ ಹೆಂಡತಿ ಸೋನಾ ಹೆಗ್ಡೆಯ ನಂಬರ್ ಮೇಲೆ ನಿಗಾ ಇಟ್ಟಿತ್ತು ಪೊಲೀಸ್ ಇಲಾಖೆ. ಹೊಸ ವರ್ಷದಂದು ಸೋನಾ ಮೊರೊಕ್ಕೋದ ಕಾಸಾಬ್ಲಾಂಕ್‌ಗೆ ತೆರಳಿದ ಮಾಹಿತಿಯನ್ನ ತೆಗೆದರು. ಸೋನಾಳನ್ನು ಬೆನ್ನುಬಿದ್ದೇ ಬನ್ನಂಜೆಯ ಮನೆಯ ಬಾಗಿಲು ಬಡಿದದ್ದು ಅದೇ ಪೊಲೀಸರು. ಕಳೆದ ಫೆಬ್ರವರಿ ಹತ್ತರಂದು ಮೊರೊಕ್ಕೋ ಪೊಲೀಸರ ನೆರವಿನಿಂದ ಸಿ.ಬಿ.ಐ.ನವರು ರಾಜನನ್ನು ಬಂಧಿಸಿದರು. ಅಲ್ಲಿ ಮೊರೊಕ್ಕೋದ ಜೈಲಿನಲ್ಲಿ ರಾಜ ಆರು ತಿಂಗಳು ಮಲಗೆದ್ದು ಬಂದ. ಭಾರತೀಯ ಮನವಿಯನ್ನು ಪುರಸ್ಕರಿಸಿದ ಮೊರೊಕ್ಕೋ ನ್ಯಾಯಾಲಯ 2015ರ ಜೂನ್ ಹದಿನೈದರಂದು ತೀರ್ಪು ನೀಡಿತು. ಈತನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ಕೂಡ ನೀಡಿತು. ಆದರೆ ಅದು ಅಧಿಕೃತವಾಗಿ ಭಾರತ ಪೊಲೀಸರನ್ನು ತಲುಪಿದ್ದು ಆಗಸ್ಟ್ ಆರರಂದು. ಅದಕ್ಕೂ ಮುಂಚಿತವಾಗಿ ಮೊರೊಕ್ಕೋ ಕೋರ್ಟಿಗೆ ಬನ್ನಂಜೆಯ ಬಗೆಗಿನ ಪ್ರಕರಣಗಳ ವಿವರಗಳನ್ನ ನೀಡಬೇಕಿತ್ತಲ್ಲಾ ಅದು ಮತ್ತೊಂದು ಸಮಸ್ಯೆಯಾಗಿತ್ತು.
ವಸಂತ್ ಗಿಳಿಯಾರ್
ವರದಿ
ಅತೃಪ್ತ ಸುಂದರಿ ರೀನಾಳನ್ನು ಪ್ರಿಯಕರನೇ ಮುಗಿಸಿದ!
ಅತೃಪ್ತ ಸುಂದರಿ ರೀನಾಳನ್ನು ಪ್ರಿಯಕರನೇ ಮುಗಿಸಿದ! ಬೆಳಗಾವಿ ಬೆಚ್ಚಿ ಬಿದ್ದಿದೆ! ಮೊನ್ನೆ ಆಗಸ್ಟ್ 15ರಂದು ಇಡೀ ದೇಶವೇ ಸ್ವಾತಂತ್ರ್ಯೋತ್ಸವವನ್ನ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರೆ ಇತ್ತ ಬೆಳಗಾವಿಯ ಕುವೆಂಪು ನಗರದಲ್ಲಿ ದೊಡ್ಡ ಅನಾಹುತವೇ ನಡೆದು ಹೋಗಿದೆ. ಅನೈತಿಕ ಸಂಬಂಧವೊಂದಕ್ಕೆ ಸಾಕ್ಷಿಯಾಗಿ ತ್ರಿಬಲ್ ಮರ್ಡರ್ ನಡೆದಿದೆ. ಇದಿಷ್ಟೇ ಆಗಿದ್ದರೆ ಇದೂ ಕೂಡ ಕ್ರೈಂ ಲೋಕದ ಪುಟದಲ್ಲಿ ಸೇರಿ ಬಿಡುತ್ತಿತ್ತೇನೋ. ಆದರೆ ನಡೆದಿರುವುದು ಮಾತ್ರ ನಿಜಕ್ಕೂ ಎಂಥಾ ಕಟುಕನ ಕಣ್ಣಲ್ಲೂ ನೀರು ತರಿಸುವಂಥದ್ದು. ಆ ಇಬ್ಬರು ಎಳೆ ಕಂದಮ್ಮಗಳನ್ನ ಕೊಂದಿರುವ ರೀತಿ ಮನುಕುಲಕ್ಕೆ ಮಾಡಿದ ಅವಮಾನವಲ್ಲದೆ ಮತ್ತೇನೂ ಅಲ್ಲ. ಹಾಗಾದರೆ ಈ ಪೈಶಾಚಿಕ ಕೃತ್ಯ ನಡೆದ ಹಿನ್ನೆಲೆಯಾದರೂ ಏನು ಆ ಪಾಪಿ ಹಂತಕನ ಮನಸ್ಥಿತಿಯಾದರು ಎಂತಹದ್ದು ಇದೆಲ್ಲದರ ಕುರಿತು ಈ ವರದಿ.
ಮಂಜುನಾಥ ಶಿರಸಂಗಿ
ವರದಿ
ಖಾಲಿಯಾಗಿದೆ ಸರಕು: ಇದು ಅವನ ಹಳಸಿದ ಉಪ್ಪಿಟ್ಟು
‘ಉಪ್ಪಿ-2’ ಸಿನೆಮಾ ಮೊದಲಿಂದಲೂ ಪ್ರೇಕ್ಷಕರನ್ನ ಸಾಕಷ್ಟು ಕನ್‌ಫ್ಯೂಸ್ ಮಾಡುತ್ತದೆ. ಅಷ್ಟರ ಮಟ್ಟಿಗೆ ಉಪ್ಪಿ ಯಶಸ್ವಿ. ಚಿತ್ರ ಎರಡು ಶೇಡ್‌ಗಳಲ್ಲಿ ಒಟ್ಟಾಗಿ ಸಾಗುತ್ತದೆ. ಒಂದು ಮೆದುಳಾದರೆ ಮತ್ತೊಂದು ಮನಸ್ಸು. ಕೋತಿಯಂಥ ಮನಸ್ಸನ್ನ ಮೆದುಳಿನಿಂದ ನಿಗ್ರಹಿಸಬೇಕು. ನಮ್ಮ ಮೆದುಳಿಗೆ ಆ ಶಕ್ತಿ ಇದೆ ಎಂಬುದು ಸಂದೇಶ. ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ನೀನು. ‘ನೀನು’ ಎಂದರೆ ಪ್ರತಿಯೊಬ್ಬನು. ಎಲ್ಲರೂ ಇಲ್ಲಿ ತಮ್ಮನ್ನ ತಾವು ನೋಡಿಕೊಳ್ಳಬಹುದು. ಇದಕ್ಕೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದನ್ನ ಸಾಂಕೇತಿಕವಾಗಿ ತೋರಿಸಲಾಗಿದೆ. ಉಪೇಂದ್ರದಲ್ಲಿದ್ದ ‘ನಾನು’ ಪಾತ್ರ ಇಲ್ಲಿ ‘ನೀನು’ ಆಗಿ ಬದಲಾಗಿದೆ. ಎಲ್ಲವನ್ನ ಬಿಟ್ಟಾಕಿ ವರ್ತಮಾನದಲ್ಲಿ ಬದುಕು ಎಂದು ಬಿಂಬಿಸುವ, ವೈಟ್ ಅಂಡ್ ವೈಟ್ ಹಾಕಿಕೊಂಡು ಬೋಧನೆ ಮಾಡುವ ‘ನೀನು’ ಎಂಬ ಪಾತ್ರ ಶುಭ್ರ ಮನಸ್ಸು ಎಂಬುದರ ಸಂಕೇತವಾಗಿದೆ.
ಅಶ್ವಿನ್ ಕುಮಾರ್
ವರದಿ
ಹರಿಹರ: ಪಂಚಮಸಾಲಿ ಸ್ವಾಮಿಯನ್ನ ಶಿಷ್ಯರೇ ಗುದ್ದಿ ಓಡಿಸಿದರು!
ದಾವಣಗೆರೆ ಜಿಲ್ಲೆಯ ಹರಿಹರದ ಪ್ರಸಿದ್ಧ ಪಂಚಮಸಾಲಿ ಪೀಠದ ಚರ ಗುರು ಶ್ರೀ ಸಿದ್ದಲಿಂಗ ಸ್ವಾಮಿಯನ್ನ ಪೀಠದಿಂದ ಕಿತ್ತೊಗೆಯಲಾಗಿದೆ. ಇಂವ ಮಾಡುತ್ತಿದ್ದ ಘನಂದಾರಿ ಕೆಲಸಗಳನ್ನ ಇಷ್ಟು ವರ್ಷ ಸಹಿಸಿಕೊಂಡಿದ್ದ ಪೀಠದ ಆಡಳಿತ ಮಂಡಳಿ ಮೊನ್ನೆ ಹದಿನೇಳರ ಸೋಮವಾರ ವಿಶೇಷ ಸಭೆ ನಡೆಸಿ ಉಚ್ಛಾಟಿಸಿದೆ.
ಕಾಂತರಾಜ್ ಅರಸ್
ನೇವಿ ಕಾಲಂ
ಪ್ರಗತಿಯ ಸೂರ ಕೆಳಗೆ ಉಳಿದೀತೇ ಹಳೆಯ ಬೀದಿ
ಕೃಷ್ಣನೂರು, ಕೃಷ್ಣನ ರಥಬೀದಿ ಅಲ್ಲಿ ವಾಸಿಸುತ್ತಿರುವ, ಯಾವಾಗಲೋ ವಾಸಿಸಿ ಹೊರನಡೆದವರ ಪಾಲಿಗೆ ಎಂದಿಗೂ ಹಾಗೇ ಇರಲಾದೀತಾ ಈ ಜಗತ್ತಲ್ಲಿ ಬೆಳೆಯುವುದು, ಪ್ರಗತಿ, ಅಭಿವೃದ್ಧಿ ಅಂತೆ ಬಳಸುವ ಪದಗಳಿವೆಯ ಅದಕ್ಕೆ ವ್ಯಾವಹಾರಿಕವಾಗಿ ಇರುವಷ್ಟು ಮೌಲ್ಯ ಭಾವನಾತ್ಮಕವಾಗಿ ಇಲ್ಲ. ನಮ್ಮೂರು ಹಿಂದೆ ಮಳೆ ಗಾಳಿಗಳಿಂದ ಮೈವೆತ್ತಿತ್ತು. ಬೇಸಿಗೆಯ ಮಧ್ಯಾಹ್ನ ಜಗಲಿ ಮೇಲೆ ಮೈಚೆಲ್ಲಿದರೆ ಹಾಯಾದ ಗಾಳಿ ನಿಮ್ಮ ಬೇಸಗೆಯ ದಣಿವನ್ನೆ ಕಳೆದು ಹೋಗುತ್ತಿತ್ತು. ಚಳಿ ಅಂತ ಮೈ ಗಡಗಡನೆ ನಡುಗಿಸಿಕೊಂಡು ಬೆಳಿಗ್ಗೆ ಎದ್ದು ಅಂಗಳಕ್ಕೆ ಬಂದು ನಿಂತಿದ್ದರೆ ಕಟ್ಟಗೆ ಕಾದಿರುವ ಸೂರ್ಯ ಬೆಚ್ಚಗೆ ಮಾಡುತ್ತಿದ್ದ. ಯಾವುದೋ ರಾತ್ರಿ ಧೋ ಅಂತ ಶುರುವಾದ ಮಳೆ ಮರುದಿನ ಮುಗಿಸಿ, ಅದರ ಮರುದಿನವೂ ಕಳೆದು, ಮತ್ತೊಂದು ದಿನ ಮಧ್ಯಾಹ್ನದ ಹೊತ್ತಿಗೆ ಕೊನೆಗೊಳ್ಳುತ್ತಿತ್ತು. ಥತ್ತೆರಿಕೆ ಮಳೆ ಅಂತ ಅನ್ನಿಸುತ್ತಿರಲಿಲ್ಲ, ಚಳಿಗಾಲದ ಚಳಿಗೆ ಬೈಯುತ್ತಿರಲಿಲ್ಲ, ಬೇಸಗೆಯ ಸೆಕೆಗೆ ಬೇಸರಿಸಿಕೊಳ್ಳುತ್ತಿರಲಿಲ್ಲ. ಅದು ಆ ಕ್ಷಣದ ಮನಸ್ಥಿತಿಯೊಂದು ಒಪ್ಪಿಕೊಂಡ, ಅಪ್ಪಿಕೊಂಡ ರೊಮ್ಯಾಂಟಿಕ್ ಆದ ಪ್ರಕೃತಿಯದು.
ನೇವಿ
ಜಾನಕಿ ಕಾಲಂ
ಒಂದು ಪ್ರಸಂಗ ಮತ್ತು ಪರಿಣಾಮ :ಭಾಗ-3
ಪರ್ಫೆಕ್ಟ್ ಪ್ರೋಗ್ರೆಸಿವ್ ಟೆನ್ಸ್ The perfect progressive tense describes actions that repeated over a period of time in the past, are continuing in the present, andor will continue in the future. The present perfect progressive tense tells you about a continuous action that was initiated in the past and finished at some point in the past; however, the action has some relation to the present time. Use havehasbeening. Example: -It has been raining, and the street is still wet. -I have been running, and I am still tired. ಮೂರನೆಯ ಉದಾಹರಣೆ. I have been loving, and I am still lost.
ಜಾನಕಿ
ಅಂಕಣ : ಆಕಾಶಬುಟ್ಟಿ
ಹುಡುಗ ಮೆಂಟಲಿ ಟಾರ್ಚರ್ ಮಾಡಿದರೆ ಏನು ಮಾಡುತ್ತೀರಿ
ನಾನಾಗ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಲಿಟರೇಚರ್ ಓದುತ್ತಿದ್ದೆ. ಈ ಹುಡುಗ ಅಲ್ಲೇ ಮತ್ತೊಂದು ಡಿಪಾರ್ಟ್‌ಮೆಂಟ್‌ನಲ್ಲಿದ್ದ. ಹೀಗೇ ಯಾವುದೋ ಸಾಹಿತ್ಯಕ ಚಟುವಟಿಕೆಯಲ್ಲಿ ಪರಿಚಯವಾದ. ಆ ಸಮಯದಲ್ಲಿ ನಾನು ‘ಹಾಯ್ ಬೆಂಗಳೂರ್!’ ಪತ್ರಿಕೆಯಲ್ಲಿ ‘ಆಕಾಶಬುಟ್ಟಿ’ ಕಾಲಂ ಬರೆಯುತ್ತಿದ್ದೆ. ನನ್ನ ವಯಸ್ಸಿಗೆ ಮೀರಿದ, ನನ್ನ ನಿರೀಕ್ಷೆಗೆ ಮೀರಿದ ಜನಪ್ರಿಯತೆ ಆ ಕಾಲಂ ಬರವಣಿಗೆಯಿಂದ ನನಗೆ ಸಿಕ್ಕಿತ್ತು. ಕ್ಯಾಂಪಸ್‌ನಲ್ಲಿ ಎಲ್ಲರೂ ನನ್ನನ್ನು ಹಾಯ್ ಹುಡುಗಿ, ಆಕಾಶಬುಟ್ಟಿ ಬರೆಯೋದು ಇವಳೇ ಅಂತಲೇ ಗುರುತಿಸುತ್ತಿದ್ದರು. ಹರೆಯ, ಜನಪ್ರಿಯತೆ, ಏಕಾಂಗಿತನ-ಎಲ್ಲಾ ಕೂಡಿದರೆ ಹೇಗಿರಬಹುದೋ ಹಾಗಿದ್ದೆ ನಾನು. ಒಂದು ಒಳ್ಳೆಯ ಸ್ನೇಹಕ್ಕಾಗಿ ಮನಸ್ಸು ಹಂಬಲಿಸುತ್ತಿತ್ತು. ಆಗ ಈ ಹುಡುಗ ಸಿಕ್ಕ.
ಎಚ್.ಡಿ. ಸುನೀತಾ
ಅಂಕಣ : ನೂರು ಮುಖ ಸಾವಿರ ದನಿ
ರಂಗ ಭೂಮಿಯ ಪಿತಾಮಹಾ ಗುಬ್ಬಿ ವೀರಣ್ಣ
ನಾಟಕ, ಸಿನಿಮಾ, ಸಾಹಿತ್ಯ, ಸಂಗೀತ, ಪತ್ರಿಕೋದ್ಯಮ ಒಳಾಂಗಣ-ಹೊರಾಂಗಣ ಪಾಕಶಾಸ್ತ್ರ ಹೀಗೆ ಹಲವು ಅಭಿರುಚಿ ಹಾಗೂ ಗೀಳುಗಳುಳ್ಳವನು ನಾನು. ಚಿಕ್ಕಂದಿನಿಂದಲೂ ಈ ಎಲ್ಲಾ ರಂಗಗಳು ಹಾಗೂ ಪ್ರಾಕಾರಗಳಲ್ಲಿ ಸಕ್ರಿಯವಾದ ಆಸಕ್ತಿ. ನಾನು ನಾಟಕಗಳ ಪ್ರೇಕ್ಷಕ ಪ್ರೇಮಿಯೂ ಹೌದು. ರಂಗ ನಟನೂ ಹೌದು. ಹೀಗಾಗಿ ನಾನು ವೃತ್ತಿ ಹಾಗೂ ಪ್ರವೃತ್ತಿ ಹವ್ಯಾಸಿ ರಂಗಭೂಮಿಗಳ ಅನೇಕಾನೇಕ ನಾಟಕಗಳನ್ನು ನೋಡಿದ್ದೇನೆ. ಕಮತಗಿಯ ಹುಚ್ಚೇಶ್ವರ ನಾಟ್ಯಸಂಘ ಇಳಕಲ್‌ನ, ಮಹಾಂತೇಶ್ವರ ನಾಟ್ಯ ಸಂಘ ಶ್ರೀಕಂಠೇಶ್ವರ ಕೃಪಾಪೋಷಿತ ನಾಟಕ ಮಂಡಳಿ, ನಾಗರತ್ನಮ್ಮನವರ ಸ್ತ್ರೀ ನಾಟಕ ಮಂಡಳಿ, ಓಬಳೇಶ್‌ರ ನಾಟಕ ಕಂಪನಿ, ಚಿತ್ರದುರ್ಗದ ಕುಮಾರಸ್ವಾಮಿ ಕಂಪನಿ, ಚಿಂದೋಡಿ ಲೀಲಾರವರ ಕಂಪನಿ, ಗುಡಿಗೇರಿ ಬಸವರಾಜುನ ಸಂಗಮೇಶ್ವರ ಕಂಪನಿ, ಮಾಸ್ಟರ್ ಹಿರಣ್ಣಯ್ಯನವರ ಕಂಪನಿ, ಹೆಚ್.ಕೆ.ಯೋಗಾನರಸಿಂಹರವರ ನಾಟಕ ಮಂಡಳಿ ಈ ಎಲ್ಲ ಕಂಪನಿಗಳ ನಾಟಕಗಳು ಹಾಗೂ ಅನೇಕ ಹವ್ಯಾಸಿ ನಾಟಕಗಳನ್ನು ಸಹ ನೋಡಿರುತ್ತೇನೆ. ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ನಾನು ಸಹ ಅಭಿನಯಿಸಿರುತ್ತೇನೆ. ಹೀಗಾಗಿ ರಂಗಭೂಮಿ, ಪಾತ್ರವರ್ಗ, ಮಾಲೀಕರು, ನಾಟಕಗಳು, ರಂಗಕರ್ಮಿಗಳು ಈ ಎಲ್ಲದರ ಬಗ್ಗೆ ನನಗೆ ಸೆಳೆವು ಇದ್ದೇ ಇದೆ.
ಎಂ.ವಿ. ರೇವಣಸಿದ್ದಯ್ಯ