O Manase


Top Clips From This Issue
ಓ ಮನಸೇ..ಯ ಸೆಂಚುರಿ, ಹೊಡೀರಿ ಚಪ್ಪಾಳೆ ಇದು ಭರ್ಜರಿ ಶತಕ. ನರ್ವಸ್ ನೈಂಟಿ ನಮ್ಮನ್ನು ಕಾಡಲಿಲ್ಲ, ರನೌಟ್ ಆಗುತ್ತೇವೋ ಎಂಬ ಭೀತಿಯೂ ಬಾಧಿಸಲಿಲ್ಲ. ಒಂದು ನಿರಾಯಾಸದ ಸಿಕ್ಸರ್ ನೊಂದಿಗೆ ‘ಓ ಮನಸೇ’ ಸೆಂಚುರಿ ಬಾರಿಸಿದೆ. ಈ ನೂರರ ಪಯಣದಲ್ಲಿ ಮನಮೋಹಕ ಸ್ವ್ಕೇರ್ ಕಟ್ ಗಳಿವೆ, ಲಾಲಿತ್ಯಪೂರ್ಣ ಲೆಗ್ ಗ್ಲಾನ್ಸ್ ಗಳಿವೆ, ಸತ್ವಯುತ ಕವರ್ ಡ್ರೈವ್ ಗಳಿವೆ. ನಮ್ಮ ಪ್ರತಿಯೊಂದು ಹೊಡೆತಕ್ಕೂ ನಿಮ್ಮ ಚಪ್ಪಾಳೆ ಬಿದ್ದಿದೆ ಅನ್ನುವುದೇ ವಿಶೇಷ. ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಶ್ರದ್ಧೆ, ಹುಮ್ಮಸ್ಸು, ಉತ್ಸಾಹಗಳನ್ನು ಬಂಡವಾಳವಾಗಿಟ್ಟುಕೊಂಡು ಈ ನೂರರ ಸಂಚಿಕೆಯನ್ನು ರೂಪಿಸಿದ್ದೇವೆ. ಕಿರುಚಾಡಲಿಲ್ಲ, ಚೀರಾಡಲಿಲ್ಲ, ಪಿಸುಮಾತಲ್ಲೇ ಎಲ್ಲವನ್ನೂ ಹೇಳುತ್ತಾ ನಸುನಾಚಿಕೆಯೊಂದಿಗೆ ಸೆಂಚುರಿ ಕ್ಲಬ್ಬಲ್ಲಿ ಕುಳಿತಿದ್ದೇವೆ. ವಾಹ್ ನರ! ವೇಗಸ್ ನರ ನರಮಾನವನ ಒಳಗಿರುವ ಈ ನರವನ್ನು ಮೀಟಿದರೆ ಸಾಕು, ಬದುಕು ಸುಂದರ. ಮನಸ್ಸು ಮತ್ತು ದೇಹವನ್ನು ಬೆಸೆಯುವ ವೇಗಸ್ ನರಕ್ಕೆ ತರಬೇತಿ ನೀಡುವುದಕ್ಕೆ ಡಾಕ್ಟರ್ ಬೇಕಿಲ್ಲ. ಕುಳಿತಲ್ಲೇ ಟ್ಯೂನ್ ಮಾಡಬಹುದು ಎಂದು ಪತ್ತೆ ಮಾಡಿದ್ದಾರೆ ಈ ಯುಗದ ಪ್ರಸಿದ್ಧ ಸಂಶೋಧಕ ನಾಗೇಶ್ ಹೆಗಡೆ. ವಾನರರಂತೆ ವರ್ತಿಸುವ ಮಾನವರೆಲ್ಲರೂ ಓದಲೇಬೇಕಾದ ಲೇಖನ. ಅವನು 16000 ಕಿಲೋಮೀಟರ್ ನಡೆದ.. ಅವನು ನಮ್ಮ ಹಿಮಾಲಯದ ಕಂದರಗಳಲ್ಲಿ 25 ವರ್ಷ ಅಲೆದಾಡಿದ. ಶಿಕ್ಷಕನಾಗಿದ್ದವನು ಭಿಕ್ಷುಕನ ವೇಷದಲ್ಲಿ ಟಿಬೆಟ್ಟಿನ ನೆಲವನ್ನು ಇಂಚಿಂಚಾಗಿ ಅಳೆದ. ವಿಕ್ಟೋರಿಯಾ ರಾಣಿಯಿಂದ ಚಿನ್ನದ ಪದಕ ಪಡೆದುಕೊಂಡ ಈ ಅಲೆಮಾರಿ ಮತ್ತು ಗೂಢಚಾರಿಯ ರೋಚಕ ಕತೆಯಿದು. ಇವನ ಮುಂದೆ ಜೇಮ್ಸ್ ಬಾಂಡ್ 000. ಹೂಂ ಅಂತೀಯಾ..ಊಹೂಂ ಅಂತೀಯಾ.. ಇದೊಂದು ಅವಳ ಮುಂದೆ ಮಂಡಿಯೂರಿ ಕುಳಿತವನ ಕೈಯಲ್ಲಿ ಕೆಂಪು ಗುಲಾಬಿ, ಅವಳ ಕೆನ್ನೆಯೂ ಗುಲಾಬಿಯಾದರೆ ಪ್ರೀತಿ ಸಕ್ಸೆಸ್. ಇದು ಹಳೇ ಸ್ಟೈಲು. ಈಗ ವಾಟ್ಸಾಪ್ ನಲ್ಲೇ ಗುಲಾಬಿ ಕಳಿಸಬಹುದು, ಅವಳು ನಾಚಿಕೊಳ್ಳದೆಯೇ ಒಲಿಯಬಹುದು. ನಿಧನಿಧಾನವಾಗಿ, ವಿಧವಿಧಾನವಾಗಿ ಹುಡುಗಿಯರನ್ನು ಒಲಿಸಿಕೊಳ್ಳುವ ಟಾಪ್ ಟೆನ್ ಸೂತ್ರಗಳನ್ನು ನಿಮ್ಮ ಮುಂದೆ ಸಾದರಪಡಿಸುತ್ತಿದ್ದಾರೆ ನಮ್ಮ ಲವ್ ಗುರು ಜೋಶೀಲಾ. ಇದು ಮೀಟರ್ ಇರುವವರಿಗೆ ಮಾತ್ರ. ನಾ ನಿಮ್ಮ ಮರೆಯಲಾರೆ... ನಾವು ಹೀರೋಗಳ ಬಗ್ಗೆ ಮಾತಾಡೋದಿಲ್ಲ, ಅವರು ನಿರ್ವಹಿಸಿದ ಪಾತ್ರಗಳ ಬಗ್ಗೆ ಮಾತಾಡುತ್ತೇವೆ. ಆ ಪಾತ್ರಗಳು ಯಾಕೆ ನಮ್ಮ ಭಾವಕೋಶದೊಳಗೆ ಇಂದಿಗೂ ಭದ್ರವಾಗಿ ಕುಳಿತಿವೆ ಅನ್ನುವುದರ ಬಗ್ಗೆ ಮಾತಾಡ್ತೇವೆ. ಉದಾಹರಣೆಗೆ ಬಂಗಾರದ ಮನುಷ್ಯ ಚಿತ್ರದ ರಾಜೀವ. ಇಂಥಾ ಟಾಪ್ ಟೆನ್ ಪಾತ್ರಗಳನ್ನು ನೆನೆಯುವುದೇ ಒಂದು ಪುಣ್ಯ ಕಾರ್ಯ ಅಲ್ವೇ . ಒಳ್ಳೇ ಪುಸ್ತಕಗಳ ಕಡೆ ಓಡು... ಮೇಲಿನದ್ದು ಹೆಡಿಂಗು. ಶುದ್ಧವಾಗಿರೋದೊಂದೇ ಓದು ಅನ್ನೋದು ಬಾಟಮ್ ಲೈನು. ಕತೆ, ಕವನ, ಅನುವಾದ, ಆಧ್ಯಾತ್ಮ ಅನ್ನುವ ತಾರತಮ್ಯವನ್ನು ಮಾಡದೇ ಕಳೆದ ಕೆಲವು ವರ್ಷಗಳಲ್ಲಿ ಬಂದ ಅತ್ಯುತ್ತಮ ಹತ್ತು ಪುಸ್ತಕಗಳ ಬಗ್ಗೆ ಪುಟ್ಟಪುಟ್ಟ ಟಿಪ್ಪಣಿಗಳು ಇಲ್ಲಿವೆ. ಮೊದಲು ಇದನ್ನು ಓದಿ, ಆಮೇಲೆ ಆ ಪುಸ್ತಕಗಳನ್ನು ಓದಿ. ಯಾಕೆಂದರೆ ಟಿಪ್ಪಣಿ ಬರೆದವರು ಕನ್ನಡ ಸಾಹಿತ್ಯವನ್ನು ಅರೆದು ಗಟಗಟ ಕುಡಿದಿರುವ ನೇವಿ ಅವರು. ಅವರ ಶಿಫಾರಸ್ಸನ್ನು ಯಾರೂ ತಳ್ಳಿಹಾಕುವ ಹಾಗೇ ಇಲ್ಲ. ಆಕೆಯನ್ನು ಇದೊಂದು ಸಲ ನೀನು ಕ್ಷಮಿಸಬೇಕು ಸತ್ಯ ಹೇಳಿದರೆ ಸತ್ಯನಾಶ್. ಮದುವೆಗೆ ಮುಂಚೆ ನನಗೆ ಇನ್ನೊಬ್ಬನೊಂದಿಗೆ ಸಂಬಂಧ ಇತ್ತು. ಹಾಗಂತ ಹೆಂಡತಿ ಹೇಳಿದರೆ ಗಂಡನಿಗೆ ಸಿಡಿಲು ಬಡಿಯದೇ ಇರುತ್ತದೆಯೇ ಆತನ ಯಮಯಾತನೆಗೂ ರವಿ ಬೆಳಗೆರೆ ಪರಿಹಾರ ಹೇಳುತ್ತಾರೆ ‘ಸಮಾಧಾನ’ದಿಂದ. ಸಾವಿರ ಸಂತೋಷ ಮತ್ತು ಮರೆಯಾಗದ ದುಃಖ ಅಡಿಗರ ಒಡೆದು ಬಿದ್ದ ಕೊಳಲು ನಾನು ಕವಿತೆ ತನ್ನನ್ನು ಬೆಳದಿಂಗಳಂತೆ ಸುಟ್ಟ ಪರಿಯನ್ನು ನೆನೆಯುತ್ತಾ ರವಿಬೆಳಗೆರೆ ಅವರು ಸ್ನೇಹರಾಹಿತ್ಯ ಬದುಕಿನ ಕಷ್ಟಗಳನ್ನು ಹೇಳಿಕೊಂಡಿದ್ದಾರೆ ಮನಸಿನ್ಯಾಗಿನ ಮಾತು ಅಂಕಣದಲ್ಲಿ. ಇಂಥಾ ಖಿನ್ನತೆ ನಿಮ್ಮನ್ನು ಆಗಾಗ ಕಾಡಿರಬಹುದು. ಆದರೆ ಗೆಳೆಯರೊಬ್ಬರು ಬಳಿಗೆ ಬಂದಾಗ ಮನಸು ಹಗುರ ಹಗುರ. ಮಳೆ ನಿಂತು ಹೋದಮೇಲೆ.... ಅಸಲಿ ಸಾಹಿತ್ಯದಿಂದ ಸಿನಿಮಾ ಸಾಹಿತ್ಯಕ್ಕೆ ಮತಾಂತರಗೊಂಡ ಕವಿ ಜಯಂತ್ ಕಾಯ್ಕಿಣಿ ಅವರು ತಮ್ಮ ಹಾಡುಪಾಡುಗಳ ಬಗ್ಗೆ ಆತ್ಮೀಯವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ಸಾವಾಸ ಅವರಿಗೆ ಬೇಸರಕ್ಕಿಂತ ಸುಖವನ್ನೇ ಜಾಸ್ತಿ ತಂದುಕೊಟ್ಟಿದೆ ಅನ್ನೋದು ಶುಭಸುದ್ದಿ. ಹೊಸಕವಿಗಳಿಗೆ ಒಂದಿಷ್ಟು ಟಿಪ್ಸ್ ಕೂಡಾ ಇಲ್ಲಿದೆ. ಜಾನಕಿ ಕಾಲಂನಲ್ಲಿ ನಾಯಕನಿಗೊಂದು ಆಘಾತ ಕಾದಿದೆ, ಅದೇನೂಂತ ನಾವು ಹೇಳೋಲ್ಲಪ್ಪ! ಚೈತನ್ಯದ ಚಿಲುಮೆ ಅಂಕಣದಲ್ಲಿ ಗೆದ್ದವನ ಕತೆಯಿದೆ, ಓದುಗರು ಮೆಚ್ಚಿದ ಹಾಡುಗಳಿಗೇ ಐದು ಪುಟಗಳು ಮೀಸಲಾಗಿವೆ, ಕುರುಕ್ಷೇತ್ರದ ರವಿಶಾಸ್ತ್ರಿ ಸಂಜಯನ ಪರಿಚಯ ಪುರಾಣಪ್ರಪಂಚ ಕಾಲಂನಲ್ಲಿದೆ, ಕುಂತಲ್ಲೇ ಕೈಲಾಸ ಅನ್ನುವ ಸೋಂಬೇರಿ ಬೆಂಗಳೂರಿಗರ ಬಗ್ಗೆ ಮಹಾಶ್ವೇತ ಗೇಲಿ ಮಾಡಿದ್ದಾರೆ, ಎಲ್ಲಿದ್ದಾನೆ ನಿಮ್ಮ ದೇವರು ಅಂತ ಥೇಟು ಹಿರಣ್ಯಕಶಿಪುವಿನಂತೆ ಘರ್ಜಿಸಿದ್ದಾರೆ ಗೀತಾಸುತ. ಶತಕ ಬಾರಿಸಿದ ಸಂಭ್ರಮಕ್ಕೆ ಇಷ್ಟು ಸಾಕಲ್ವಾ. ಹಾಂ, ಇವೆಲ್ಲದರ ಜೊತೆ ಬೋನಸ್ ರೂಪದಲ್ಲಿ ಮುಖಪುಟದಲ್ಲಿ ರವಿ ಇದ್ದಾರೆ, ಅವರ ಮಾತುಗಳಿವೆ, ಸಹಿಯಿದೆ. ಅಂಗಡಿಗೆ ಓಡಿ, ಓ ಮನಸೇ ಓದಿ.